ಐಪಿಎಲ್ ಮುಗಿದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾ ಪ್ರಕಟದ ಮೇಲೆ ನೆಟ್ಟಿದೆ. ಇದೇ ವೇಳೆ ಭಾರತ ಅಂಡರ್ 19 ಪುರುಷರ ತಂಡ ಸಹ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಕಿರಿಯರ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಗಳನ್ನು ಆಡಲಿದೆ ಎಂದು ತಿಳಿದು ಬಂದಿದೆ. ಈ ಪ್ರವಾಸದ ಆರಂಭದಲ್ಲಿ ಭಾರತ ತಂಡ ಆರಂಭದಲ್ಲಿ ಏಕದಿನ ಸರಣಿ ಬಳಿಕ ಟೆಸ್ಟ್ ಸರಣಿಗಳನ್ನು ಆಡಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಯುವ ಆಟಗಾರರಿಗೆ ತಮ್ಮ ಕ್ಷಮತೆಯನ್ನು ಪ್ರದರ್ಶಿಸಲು ಇದು ಉತ್ತಮ ವೇದಿಕೆ ಆಗಿರಲಿದೆ. ಈ ಯುವ ತಂಡದಲ್ಲಿ ಅವಕಾಶವನ್ನು ಪಡೆಯುವಲ್ಲಿ ಐಪಿಎಲ್‌ನಲ್ಲಿ ಮಿಂಚುಹರಿಸುತ್ತಿರುವ ಯುವ ಆಟಗಾರರಿಗೆ ಅವಕಾಶ ಸಿಗಲಿದೆ. ಈಗಾಗಲೇ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ 17 ವರ್ಷದ ಯುವ ಆಟಗಾರ ಆಯುಷ್ ಮಾತ್ರೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುವ 14 ವರ್ಷದ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ಫ್ಲೈಟ್ ಹತ್ತುವ ಕನಸಿನಲ್ಲಿದ್ದಾರೆ. ವೈಭವ್ ಸೂರ್ಯವಂಶಿ ಇತ್ತೀಚಿಗೆ ಗುಜರಾತ್ ಟೈಟಾನ್ಸ್ ವಿರುದ್ಧ ಶತಕ ಬಾರಿಸಿ ಸಂಚಲನ ಮೂಡಿಸಿದ್ದರು.

ಮುಂದಿನ ವರ್ಷ ಜನವರಿಯಲ್ಲಿ ಅಂಡರ್ 19 ವಿಶ್ವಕಪ್ ನಡೆಯಲಿರುವ ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಭಾರತಕ್ಕೆ ಬಹಳ ಮುಖ್ಯವಾಗಿರಲಿದೆ. ಮುಂದಿನ ವರ್ಷದ ಆರಂಭದಲ್ಲಿ ಅಂಡರ್ 19 ವಿಶ್ವಕಪ್ ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ಆಯೋಜಿಸಲಾಗುತ್ತದೆ. 2024ರ ಡಿಸೆಂಬರ್‌ನಲ್ಲಿ ಭಾರತದ ಅಂಡರ್ 19 ತಂಡ ಏಷ್ಯಾ ಕಪ್‌ನಲ್ಲಿ ಭಾಗವಹಿಸಿತ್ತು. ಇನ್ನು ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ನಡೆದ ಫೈನಲ್‌ನಲ್ಲಿ ಸೋಲು ಕಂಡಿತ್ತು. ಇದಾದ ಬಳಿಕ ಅಂಡರ್ 19 ತಂಡ ಈ ಪ್ರವಾಸವನ್ನು ಬೆಳೆಸಲಿದೆ.
ವೈಭವ್ ಸೂರ್ಯವಂಶಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಗುಜರಾತ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 209 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 15.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆ ಹಾಕಿ ಜಯ ಸಾಧಿಸಿತು. ಈ ವೇಳೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಇವರು 38 ಎಸೆತಗಳಲ್ಲಿ 7 ಬೌಂಡರಿ, 11 ಸಿಕ್ಸರ್ ಸಹಾಯದಿಂದ 101 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ವೈಭವ್ ಹಲವು ದಾಖಲೆಗಳನ್ನು ಬರೆದರು. ವೈಭವ್ ವೇಗವಾಗಿ ಭಾರತದ ಪರ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಸಹ ಇವರ ಪಾಲಾಗಿದೆ.