
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಅಡಿಲೇಡ್‌ನಲ್ಲಿ ಇಂದು ಆರಂಭವಾಗಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಈ ಹಿಂದಿನ ಪ್ರವಾಸದಲ್ಲಿ ಟೀಮ್ ಇಂಡಿಯಾ ತನ್ನ ವಶಕ್ಕೆ ಪಡೆದುಕೊಂಡಿತ್ತು. ಹೀಗಾಗಿ ಈ ಬಾರಿ ಅದನ್ನು ಉಳಿಸಿಕೊಳ್ಳುವುದು ಭಾರತದ ಮೊದಲ ಆದ್ಯತೆಯಾಗಿರಲಿದೆ.
ಟೀಮ್ ಇಂಡಿಯಾ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾ ತಂಡಕ್ಕೆ ಟಿಮ್ ಪೆಯ್ನ್ ನಾಯಕತ್ವಿದೆ. ಹೀಗಾಗಿ ಎರಡು ಬಲಿಷ್ಠ ತಂಡಗಳ ನಡುವಿನ ಈ ಸುದೀರ್ಘ ಹಣಾಹಣಿ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.
ಮೊದಲ ಟೆಸ್ಟ್ ಪಂದ್ಯಕ್ಕೆ ಅಡಿಲೇಡ್ ಓವಲ್ ವೇದಿಕೆಯಾಗಿದ್ದು ಈ ಪಂದ್ಯ ಅಹರ್ನಿಶಿಯಾಗಿ ಸಾಗಲಿದೆ. ಇದು ಟೀಮ್ ಇಂಡಿಯಾದ ಮೊದಲ ವಿದೇಶಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವೂ ಹೌದು. ಈ ಮೊದಲ ಟೀಮ್ ಇಂಡಿಯಾ ಕಳೆದ ವರ್ಷ ಬಾಂಗ್ಲಾದೇಶದ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಮೊದಲ ಬಾರಿಗೆ ಆಡಿತ್ತು.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವ ಏಕೈಕ ಟೆಸ್ಟ್ ಪಂದ್ಯ ಇದಾಗಿದೆ. ಅಡಿಲೇಡ್‌ನಲ್ಲಿ ನಡೆಯುವ ಈ ಟೆಸ್ಟ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ತವರಿಗೆ ಮರಳಲಿದ್ದಾರೆ. ಕೊಹ್ಲಿ ಅನುಷ್ಕಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಕೊಹ್ಲಿಗೆ ಪಿತೃತ್ವದ ರಜೆಯನ್ನು ಬಿಸಿಸಿಐ ನೀಡಿದೆ.
ಈ ಬಾರಿಯ ಸರಣಿಗೂ ಮುನ್ನ ಎರಡೂ ತಂಡಗಳಲ್ಲಿ ಗಾಯದ ಸಮಸ್ಯೆಗಳು ಕಂಡು ಬಂದಿದೆ. ಟೀಮ್ ಇಂಡಿಯಾ ಇಶಾಂತ್ ಶರ್ಮಾ ರೋಹಿತ್ ಶರ್ಮಾ ಮೊದಲಾದ ಅನುಭವಿ ಆಟಗಾರರ ಸೇವೆಯನ್ನು ಕಳೆದುಕೊಳ್ಳುತ್ತಿದೆ. ರೋಹಿತ್ ಶರ್ಮಾ ಆಸ್ಟ್ರೇಲಿಯಾವನ್ನು ತಲುಪಿದ್ದು ಮೂರನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಆಸ್ಟ್ರೇಲಿಯಾ ಡೇವಿಡ್ ವಾರ್ನರ್‌ರಂತಾ ಆಟಗಾರರ ಸೇವೆಯಿಂದ ಮೊದಲದಿಂದ ವಂಚಿತವಾಗಲಿದೆ.