Ind vs Aus 1st Test: ಭರ್ಜರಿ ಕಮ್‌ಬ್ಯಾಕ್‌ಗೆ ಕಾರಣ ಹೇಳಿದ ರವೀಂದ್ರ ಜಡೇಜಾ

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಐದು ವಿಕೆಟ್ ಕಬಳಿಸಿದ ರವೀಂದ್ರ ಜಡೇಜಾ ಮೊದಲ ದಿನದ ಗೌರವವನ್ನು ಭಾರತ ಪಡೆಯಲು ಕಾರಣವಾದರು. ಮೊದಲ ದಿನದಾಟದ ಮುಕ್ತಾಯದ ಬಳಿಕ ಮಾತನಾಡಿರುವ ರವೀಂದ್ರ ಜಡೇಜಾ ಮೊದಲ ದಿನದಾಟದಲ್ಲಿ ಸಾಧಿಸಿದ ಯಶಸ್ಸಿಗೆ ಕಾರಣವನ್ನು ವಿವರಿಸಿದ್ದಾರೆ.
"ನಾನು ಬೌಲಿಂಗ್ ಮಾಡಿದ ರೀತಿಯಿಂದಾಗಿ ಬಹಳ ಸಂತಸಗೊಂಡಿದ್ದೇನೆ. ನನ್ನ ಬೌಲಿಂಗನ್ನು ನಾನು ಆನಂದಿಸಿದ್ದೇನೆ. ಐದು ತಿಂಗಳ ಬಳಿಕ ಆಡುವುದು ಅದು ಕೂಡ ಟೆಸ್ಟ್ ಪಂದ್ಯದಲ್ಲಿ ಎಂದರೆ ಅದು ಸುಲಭವಿಲ್ಲ. ಇದಕ್ಕಾಗಿ ನಾನು ಸಿದ್ಧತೆ ಮಾಡಿಕೊಂಡಿದ್ದೆ. ಎನ್‌ಸಿಎನಲ್ಲಿ ಫಿಟ್‌ನೆಸ್ ಹಾಗೂ ನನ್ನ ಕೌಶಲ್ಯದ ಮೇಲೆ ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ" ಎಂದಿದ್ದಾರೆ ರವೀಂದ್ರ ಜಡೇಜಾ.
ಇನ್ನು ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ರಣಜಿ ಪಂದ್ಯದಲ್ಲಿ ಆಡಿರುವುದು ತನ್ನ ಕಮ್‌ಬ್ಯಾಕ್‌ಗೆ ಬಹಳ ಸಹಾಯವಾಯಿತು ಎಂದಿದ್ದಾರೆ. ಇತ್ತೀಚೆಗಷ್ಟೇ ರವೀಂದ್ರ ಜಡೇಜಾ ರಣಜಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಪರವಾಗಿ ತಮಿಳುನಾಡು ವಿರುದ್ಧ ಆಡಿದ್ದರು. ಈ ಪಂದ್ಯದಲ್ಲಿ ಎಡಗೈ ಬೌಲರ್ ಸೌರಾಷ್ಟ್ರ ಪರವಾಗಿ 7 ವಿಕೆಟ್ ಪಡೆದುಕೊಂಡಿದ್ದರು. "ನಾನು ಬಹಳ ಕಾಲದ ಬಳಿಕ ಪ್ರಥಮದರ್ಜೆ ಕ್ರಿಕೆಟ್(ರಣಜಿ) ಆಡಿದ್ದೆ. ಸುಮಾರು 42 ಓವರ್‌ಗಳ ಬೌಲಿಂಗ್ ದಾಳಿ ನಡೆಸಿದ್ದೆ. ಅದು ಇಲ್ಲಿಗೆ ಬಂದು ಟೆಸ್ಟ್ ಪಂದ್ಯವನ್ನಾಡಲು ನನಗೆ ಬಹಳ ದೊಡ್ಡ ಮಟ್ಟದ ಆತ್ಮವಿಶ್ವಾಸವನ್ನು ನೀಡಿತು" ಎಂದಿದ್ದಾರೆ ರವೀಂದ್ರ ಜಡೇಜಾ.
"ಈ ಪಿಚ್‌ನಲ್ಲಿ ಯಾವುದೇ ಬೌನ್ಸ್ ಇರಲಿಲ್ಲ. ನಾನು ನೇರವಾಗಿ ವಿಕೆಟ್‌ಗೆ ಗುರಿಯಾಗಿರಿಸಿ ಬೌಲಿಂಗ್ ನಡೆಸಲು ಆರಂಭಿಸಿದ್ದೆ. ಕೆಲ ಎಸೆತಗಳು ನೇರವಾಗಿದ್ದರೆ ಕೆಲ ಎಸೆತಗಳು ಸ್ಪಿನ್ ಆಗುತ್ತಿದ್ದವು. ಎಡಗೈ ಆಟಗಾರನಾಗಿ ವಿಕೆಟ್‌ನ ಹಿಂದೆ ಕ್ಯಾಚ್ ಪಡೆದು ಅತವಾ ಸ್ಟಂಪ್ ಮೂಲಕ ಔಟ್ ಅದರೆ ಅದರ ಶ್ರೇಯಸ್ಸನ್ನು ಎಸೆತಕ್ಕೆ ನೀಡಬೇಕು" ಎಂದಿದ್ದಾರೆ ರವೀಂದ್ರ ಜಡೇಜಾ.
"ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ರೀತಿಯ ಪಿಚ್‌ನಲ್ಲಿ ಆಡಿದರೂ ಅದಕ್ಕೆ ಖುಷಿ ಪಡಬೇಕು. ಬೆಂಗಳೂರಿನ ಎನ್‌ಸಿಎನಲ್ಲಿದ್ದಾಗ ನಾನು ಸಾಕಷ್ಟು ಪರಿಶ್ರಮಪಟ್ಟಿದ್ದೇನೆ. ಪ್ರತಿದಿನ ಬಹುತೇಕ 10-12 ಗಂಟೆಗಳ ಕಾಲ ನಾನು ಬೌಲಿಂಗ್ ನಡೆಸುತ್ತಿದ್ದೆ. ಇದು ನನಗೆ ಸಾಕಷ್ಟು ಸಹಾಯ ಮಾಡಿದೆ. ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವಾಗ ಸುದೀರ್ಘ ಕಾಲ ಬೌಲಿಂಗ್ ಮಾಡಬೇಕಿದ್ದ ಕಾರಣ ನನ್ನ ಲಯದ ಮೇಲೆ ಕೂಡ ನಾನು ಸಾಕಷ್ಟು ಪರಿಶ್ರಮಪಟ್ಟಿದ್ದೇನೆ" ಎಂದಿದ್ದಾರೆ ರವೀಂದ್ರ ಜಡೇಜಾ.
ಮೊದಲ ದಿನದಾಟದಲ್ಲಿ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿದ್ದಾರೆ. ಆಸ್ಟ್ರೇಲಿಯಾದ ಪ್ರಮುಖ ಆಟಗಾರರಾದ ಮಾರ್ನಸ್ ಲ್ಯಾಬುಶೈನ್ ಹಾಗೂ ಸ್ಟೀವ್ ಸ್ಮಿತ್ ಸೇರಿದಂತೆ ಒಟ್ಟು ಐದು ವಿಕೆಟ್ ಪಡೆದುಕೊಂಡು ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಭಾರೀ ಏಟು ನೀಡಿದ್ದಾರೆ.
ಇತ್ತಂಡಗಳ ಆಡುವ ಬಳಗ
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಶುಬ್ಮನ್ ಗಿಲ್, ಇಶಾನ್ ಕಿಶನ್, ಕುಲದೀಪ್ ಯಾದವ್, ಜಯದೇವ್ ಉನದ್ಕತ್, ಉಮೇಶ್ ಯಾದವ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಮ್ಯಾಟ್ ರೆನ್ಶಾ, ಪೀಟರ್ ಹ್ಯಾಂಡ್ಸ್ಕಾಂಬ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್
ಬೆಂಚ್: ಟ್ರಾವಿಸ್ ಹೆಡ್, ಮಿಚೆಲ್ ಸ್ವೆಪ್ಸನ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕ್ಯಾಮರೂನ್ ಗ್ರೀನ್, ಲ್ಯಾನ್ಸ್ ಮೋರಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications