Ind vs Aus: 3ನೇ ಟೆಸ್ಟ್‌ಗೆ ವಿರಾಟ್ ಕೊಹ್ಲಿ ಸಜ್ಜು: ನೆಟ್ಸ್‌ನಲ್ಲಿ ಬೆವರಿಳಿಸಿದ ಮಾಜಿ ನಾಯಕ

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳು ಈಗಾಗಲೇ ಮುಕ್ತಾಯವಾಗಿದ್ದು ಮೂರನೇ ಪಂದ್ಯ ಮಾರ್ಚ್ 1ರಿಂದ ಆರಂಭವಾಗಲಿದೆ. ಸರಣಿಯ ಎರಡನೇ ಪಂದ್ಯದ ಬಳಿಕ ಉತ್ತಮ ವಿರಾಟ್ ಪಡೆದುಕೊಂಡಿದ್ದ ಇತ್ತಂಡಗಳು ವಿರಾಮದ ನಂತರ ಸರಣಿಯಲ್ಲಿ ಮತ್ತೆ ಕಣಕ್ಕಿಳಿಯಲು ಸಿದ್ಧವಾಗಿದೆ. ಸತತ ಎರಡು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದಿರುವ ಟೀಮ್ ಇಂಡಿಯಾ ಆತ್ಮವಿಶ್ವಾಸದಲ್ಲಿದ್ದರೆ ಎರಡು ಪಂದ್ಯಗಳ ಭಾರೀ ಸೋಲು ಆಸಿಸ್ ತಂಡಕ್ಕೆ ದೊಡ್ಡ ಆಘಾತ ನೀಡಿದೆ.
ಇನ್ನು ಟೀಮ್ ಇಂಡಿಯಾ ಪರವಾಗಿ ಮೊದಲ ಎರಡು ಪಂದ್ಯಗಳಲ್ಲಿಯೂ ಉತ್ತಮ ಲಯದಲ್ಲಿರುವಂತೆ ತೋರಿದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲವಾಗಿರುವ ಆಟಗಾರ ವಿರಾಟ್ ಕೊಹ್ಲಿ. ಇದೀಗ ಮತ್ತೊಂದು ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ವೈಟ್‌ಬಾಲ್ ಮಾದರಿಯಲ್ಲಿ ಫಾರ್ಮ್ ಕೊಂಡಿರುವ ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿಯೂ ಅಂಥಾದ್ದೇ ಪ್ರದರ್ಶನ ನೀಡುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ 3ನೇ ಟೆಸ್ಟ್ ಪಂದ್ಯಕ್ಕಾಗಿ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ.
ಟೀಮ್ ಇಂಡಿಯಾ ಆಟಗಾರರ ಅಭ್ಯಾಸದ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ. ಈ ವಿಡಿಯೋದಲ್ಲಿ ಟೀಮ್ ಇಂಡಿಯಾದ ಆಟಗಾರರಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್, ಕುಲ್‌ದೀಪ್ ಯಾದವ್, ಶುಬ್ಮನ್ ಗಿಲ್, ಇಶಾನ್ ಕಿಶನ್, ಚೇತೇಶ್ವರ್ ಪೂಜಾರ, ಶ್ರೇಯಸ್ ಐಯ್ಯರ್ ಮೊದಲಾದ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಫಾರ್ಮ್ ಕಳೆದುಕೊಂಡು ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಹೀಗಾಗಿ ರಾಹುಲ್ ಮೂರನೇ ಪಂದ್ಯಕ್ಕೂ ಮುನ್ನ ಸಾಕಷ್ಟು ಒತ್ತಡದಲ್ಲಿದ್ದು ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರಾ ಎಂಬುದು ಕೂಡ ಪ್ರಶ್ನೆಯಾಗಿದೆ. ರಾಹುಲ್ ಬದಲಿಗೆ ಶುಬ್ಮನ್ ಗಿಲ್‌ಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ಒತ್ತಾಯಗಳು ಹೆಚ್ಚಾಗಿರುವ ಕಾರಣ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲಕಾರಿ ಅಂಶ.
2ನೇ ಟೆಸ್ಟ್ ಪಂದ್ಯದಲ್ಲಿಯೂ ಭಾರತ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ 6 ವಿಕೆಟ್‌ಗಳಿಂದ ಮಣಿಸುವ ಮೂಲಕ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡದ ಸರಣಿ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾದಂತಾಗಿದೆ.
ಇಂದೋರ್ ಹೋಲ್ಕರ್ ಕ್ರೀಡಾಂಗಣ ಕೂಡ ಭಾರತದ ಮತ್ತೊಂದು ಸ್ಪಿನ್ ಸ್ನೇಹಿ ಪಿಚ್ ಆಗಿದ್ದು ಈ ಕ್ರೀಡಾಂಗಣದಲ್ಲಿಯೂ ಟೀಮ್ ಇಂಡಿಯಾದ ಸ್ಪಿನ್ನರ್‌ಗಳು ಅಬ್ಬರಿಸಲು ಸಜ್ಜಾಗಿದ್ದಾರೆ. ರವೀಂದ್ರ ಜಡೇಜಾ, ಆರ್ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಮೊದಲ ಎರಡು ಪಂದ್ಯಗಳಲ್ಲಿಯೂ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದು ಹೋಲ್ಕರ್ ಕ್ರೀಡಾಂಗಣದಲ್ಲಿಯೂ ಅಂಥಾದ್ದೇ ಪ್ರದರ್ಶನಕ್ಕೆ ಎದುರು ನೋಡುತ್ತಿದ್ದಾರೆ.
ಟೀಮ್ ಇಂಡಿಯಾ ಸ್ಕ್ವಾಡ್ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications