
ಆಸ್ಟ್ರೇಲಿಯಾ ವಿರುದ್ಧಧ ಮೂರನೇ ಟೆಸ್ಟ್ ಪಂದ್ಯವನ್ನು ಭಾರತ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ 1-1ರಿಂದ ಸಮಬಲದಲ್ಲೇ ಉಳಿದಿದೆ. ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನ ಟೀಮ್ ಇಂಡಿಯಾದ ಆಟಗಾರರು ನೀಡಿದ ಪ್ರದರ್ಶನಕ್ಕೆ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಫಲಿತಾಂಶ ಏನೇ ಆಗಿರಲಿ ಪಂದ್ಯದ ಅಂತಿಮ ಕ್ಷಣದವರೆಗೂ ನಾವು ಕಠಿಣ ಹೋರಾಟವನ್ನು ನೀಡಬೇಕು ಎಂದು ನಾಲ್ಕನೇ ದಿನದಾಟದ ಬಳಿಕ ತಂಡ ನಿರ್ಧರಿಸಿತ್ತು ಎಂದು ಅಜಿಂಕ್ಯ ರಹಾನೆ ಪಂದ್ಯದ ಮುಕ್ತಾಯದ ಬಳಿಕ ಬಹಿರಂಗಪಡಿಸಿದ್ದು ಈ ಯೋಜನೆ ಕಾರ್ಯಗತಗೊಳ್ಳಲು ತಂಡದ ಸಹ ಆಟಗಾರರು ತೋರಿದ ಪ್ರದರ್ಶನಕ್ಕೆ ರಹಾನೆ ಸಂತಸ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ತಂಡ ನೀಡಿದ್ದ 407 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
1979ರ ಬಳಿಕ ಟೀಮ್ ಇಂಡಿಯಾ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತ್ಯಂತ ಹೆಚ್ಚು ಓವರ್ ಎದುರಿಸಿದ ಪಂದ್ಯ ಇದಾಗಿದೆ. ಭಾರತ ಸಿಡ್ನಿ ಟೆಸ್ಟ್‌ನಲ್ಲಿ 131 ಓವರ್‌ಗಳನ್ನು ಎದುರಿಸಿದ್ದು 334 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ ಕಠಿಣ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.
"ಪಂದ್ಯದ ಆರಂಭಕ್ಕೂ ಮುನ್ನ ನಾವು ನಮ್ಮ ಪಾತ್ರವನ್ನು ನಿರ್ವಹಿಸುವುದು ಹಾಗೂ ಕೊನೆಯವರೆಗೂ ಹೋರಾಡುವುದನ್ನು ಗುರಿಯಾಗಿಸಿಕೊಂಡೆವು. ಫಲಿತಾಂಶದ ಬಗ್ಗೆ ಚಿಂತೆ ಮಾಡಲಿಲ್ಲ. ಇಂದು ನಾವು ಹೋರಾಡಿದ ರೀತಿ ಹಾಗೂ ಪಂದ್ಯದುದ್ದಕ್ಕೂ ನೀಡಿದ ಪ್ರದರ್ಶನ ಶ್ರೇಷ್ಠವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲೂ ಆಸ್ಟ್ರೇಲಿಯಾ 200 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಲ್ಲಿಂದ 338 ರನ್‌ಗಳಿಗೆ ಆಲೌಟ್ ಮಾಡಲು ಸಾಧ್ಯವಾಗಿದ್ದು ನಿಜಕ್ಕೂ ಶ್ರೇಷ್ಠವಾಗಿದೆ" ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.
ನಾವು ಕೆಲ ವಿಭಾಗಗಳಲ್ಲಿ ನಾವು ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಹನುಮ ವಿಹಾರಿ ಹಾಗೂ ಆರ್ ಅಶ್ವಿನ್ ಅವರು ಬ್ಯಾಟಿಂಗ್ ಮಾಡಿದ ರೀತಿ ಹಾಗೂ ಅವರು ತೋರಿದ ಪಾತ್ರ ನಿರ್ವಹಣೆ ನಿಜಕ್ಕೂ ಅದ್ಭುತವಾಗಿತ್ತು ಎಂದು ರಹಾನೆ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ರಿಷಬ್ ಪಂತ್ ಬ್ಯಾಟಿಂಗ್ ಪ್ರದರ್ಶನ ಅಂತಿಮ ದಿನ ಭಾರತ ಗುರಿ ಬೆನ್ನಟ್ಟುವ ವೇಳೆ ಪಂದ್ಯದ ಗತಿಯನ್ನು ಬದಲಾಯಿಸಿತ್ತು ಎಂದು ರಹಾನೆ ಬಣ್ಣಿಸಿದ್ದಾರೆ.