ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯ ನವೆಂಬರ್ 22 ರಂದು ಪರ್ತ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಭರದ ಸಿದ್ಧತೆಯನ್ನು ನಡೆಸಿವೆ. ಆದರೆ ಆಸ್ಟ್ರೇಲಿಯಾಕ್ಕೆ ಟೀಮ್ ಇಂಡಿಯಾದ ಆ ಒಬ್ಬ ಪ್ಲೇಯರ್ ಚಿಂತೆ ಹೆಚ್ಚಿಸಿದೆ. ಇವರನ್ನು ಕಟ್ಟಿ ಹಾಕುವ ಬಗ್ಗೆ ಆಸೀಸ್ ಹಗಲಿರುಳು ಚಿಂತೆ ನಡೆಸಿದೆ.
ಈ ಸರಣಿ ಆರಂಭಕ್ಕೂ ಮುನ್ನವೇ ಉಭಯ ತಂಡಗಳ ಮಾಜಿ ಆಟಗಾರರು ಈ ಸರಣಿಯ ಬಗ್ಗೆ ತಮ್ಮ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯ ನೀಡುತ್ತಲೇ ಇದ್ದಾರೆ. ಈ ವೇಳೆ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೋಲು ಕಾಣಲಿದೆ ಎಂದು ರಿಕ್ಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ. ಈಗ ಆಸ್ಟ್ರೇಲಿಯಾ ತಂಡದ ಮಾಜಿ ಇಬ್ಬರು ಆಟಗಾರರು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಒಬ್ಬನನ್ನು ಕಟ್ಟಿ ಹಾಕುವ ಬಗ್ಗೆ ರಣ ತಂತ್ರವನ್ನು ರೂಪಿಸುವಲ್ಲಿ ತಲ್ಲಿನರಾಗಿದ್ದಾರೆ.

ಆಸ್ಟ್ರೇಲಿಯಾ ಆಟಗಾರರಿಗೆ ಭಯ ಹುಟ್ಟಿಸಿರುವ ಆಟಗಾರ ಟೀಮ್ ಇಂಡಿಯಾದ ರನ್ ಮಷೀನ್ ಖ್ಯಾತಿಯ ವಿರಾಟ್ ಕೊಹ್ಲಿ. ಇವರು ಆಸೀಸ್ ಬೌಲರ್‌ಗಳನ್ನು ಬಹುವಾಗಿ ಕಾಡಬಲ್ಲರು. ಟೀಮ್ ಇಂಡಿಯಾ ಈ ಬಾರಿ ಟೆಸ್ಟ್ ಸರಣಿಯನ್ನು ಗೆಲ್ಲಬೇಕಾದಲ್ಲಿ ಇವರ ಕೊಡುಗೆ ಮಹತ್ವದಾಗಿದೆ.
ಇನ್ನು ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಂಡದ ಭಾಗವಾಗಿರುವುದಿಲ್ಲ. ವೈಯಕ್ತಿಕ ಕಾರಣಗಳಿಂದ ಇವರು ತಂಡದಿಂದ ದೂರ ಉಳಿದಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ವಿರಾಟ್ ಅವರ ಮೇಲೆ ಜವಾಬ್ದಾರಿಯ ಮಹಾ ಪೂರವಿದೆ.

ವಿರಾಟ್ ಕೊಹ್ಲಿ ಫಾರ್ಮ್‌ಗಾಗಿ ಪರದಾಡ ನಡೆಸುತ್ತಿದ್ದಾರೆ. ಆದರೆ ಅವರಿಗೆ ಸವಾಲುಗಳು ಎಂದರೆ ಇಷ್ಟ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಆಸೀಸ್ ಈ ಪ್ಲೇಯರ್ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಂಡಿದೆ. ಸರಣಿಗೂ ಮುನ್ನ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದ ಶೇನ್ ವ್ಯಾಟ್ಸನ್ ತಮ್ಮ ತಂಡಕ್ಕೆ ಸಲಹೆ ನೀಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿಯನ್ನು ಕೆಣಕದಂತೆ ಸಲಹೆ ನೀಡಿದ್ದಾರೆ. ಒಂದು ವೇಳೆ ಅವರನ್ನು ಕೆಣಕಿದರೆ, ಅವರು ರುದ್ರರೂಪ ತಾಳುತ್ತಾರೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್ ಇಯಾನ್ ಹೀಲಿ, ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕಲು ಆಸೀಸ್ ಬೌಲರ್‌ಗಳು ಎಲ್ಲ ತಂತ್ರವನ್ನು ಬಳಸಬೇಕು ಎಂದಿದ್ದಾರೆ. ಅಲ್ಲದೆ ಮೊದಲ ಪಂದ್ಯದಲ್ಲಿ ತಮ್ಮ ತಂಡದ ವೇಗಿಗಳು ವಿರಾಟ್ ಅವರಿಗೆ ಎಷ್ಟು ಕಾಟ ನೀಡಲಿದ್ದಾರೆ ಎಂಬುದನ್ನು ನೋಡಲು ಕಾತುರರಾಗಿದ್ದಾಗಿ ತಿಳಿಸಿದ್ದಾರೆ. ವೇಗಿಗಳ ರಣ ನೀತಿಯನ್ನು ಅರಿಯುವ ಮುನ್ನವೇ ಅವರನ್ನು ಕಟ್ಟಿ ಹಾಕುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.