
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ 3ನೇ ಪಂದ್ಯಕ್ಕ ಭಾರತ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳು ಕೂಡ ಸಿದ್ಧತೆ ನಡೆಸುತ್ತಿವೆ. ಎರಡನೇ ಪಂದ್ಯಗಳ ಬಳಿಕ ಸುದೀರ್ಘ ವಿರಾಮದ ನಂತರ ಮಾರ್ಚ್ 1ರಿಂದ 3ನೇ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ತಾನು ಆಡಲು ನೂರು ಪ್ರತಿಶತ ಸಿದ್ಧವಾಗಿದ್ದೇನೆ ಎಂದು ಆಸ್ಟ್ರೇಲಿಯಾದ ಆಟಗಾರ ಕ್ಯಾಮರೂನ್ ಗ್ರೀನ್ ಪ್ರತಿಕ್ರಿಯಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕ್ಯಾಮರೂನ್ ಗ್ರೀನ್ ಗಾಯಕ್ಕೆ ತುತ್ತಾಗಿದ್ದರು. ಅದಾದ ಬಳಿಕ ವಿಶ್ರಾಂತಿಯಲ್ಲಿದ್ದ ಗ್ರೀನ್ ಸಂಪೂರ್ಣ ಫಿಟ್ ಆಗದ ಹೊರತಾಗಿಯೂ ಭಾರತ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಅವರು ಮೂರನೇ ಪಂದ್ಯದಲ್ಲಿ ಆಡಲು ಸಮರ್ಥವಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಕ್ಯಾಮರೂನ್ ಗ್ರೀನ್ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಲು ಸಮರ್ಥವಾಗಿರುವುದು ಆಸ್ಟ್ರೇಲಿಯಾ ತಂಡಕ್ಕೆ ಬಹಳ ದೊಡ್ಡ ಬಲ ಬಂದಂತಾಗಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಮೂರನೇ ಪಂದ್ಯಕ್ಕೆ ಅಲಭ್ಯವಾಗಲಿರುವ ಕಾರಣ ಗ್ರೀನ್ ಸೇರ್ಪಡೆ ಬಹಳ ಮುಖ್ಯವಾಗಲಿದೆ. ಅಲ್ಲದೆ ಗ್ರೀನ್ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ನೆರವಾಗುವ ಸಾಮರ್ಥ್ಯ ಹೊಂದಿರುವ ಆಟಗಾರ.
ಇನ್ನು ಇದೇ ಸಂದರ್ಭದಲ್ಲಿ 23ರ ಹರೆಯದ ಆಸ್ಟ್ರೇಲಿಯಾದ ಆಟಗಾರ ಗ್ರೀನ್ ಕಳೆದ ದೆಹಲಿಯಲ್ಲಿ ನಡೆದ ಪಂದ್ಯಕ್ಕೂ ಮುನ್ನವೇ ತಾನು ಫಿಟ್ ಎನಿಸಿಕೊಳ್ಳುವ ಸನಿಹದಲ್ಲಿದ್ದೆ ಎಂದಿದ್ದಾರೆ. ಒಂದು ವಾರಗಳ ಹೆಚ್ಚಿನ ಅವಧಿ ದೊರೆತ ಕಾರಣದಿಂದಾಗಿ ಈಗ ಸಂಪೂರ್ಣ ಫಿಟ್ ಆಗಿದ್ದು ಆಸ್ಟ್ರೇಲಿಯಾ ಪರವಾಗಿ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಕ್ಯಾಮರೂನ್ ಗ್ರೀನ್ ಭಾರತದ ವಿರುದ್ಧದ ಏಕದಿನ ಸರಣಿಗೂ ಆಯ್ಕೆಯಾಗಿದ್ದಾರೆ. ಹಾಗಾಗಿ ಟೆಸ್ಟ್ ಸರಣಿಯ ಮುಕ್ತಾಯದ ಬಳಿಕ ಕ್ಯಾಮರೂನ್ ಗ್ರೀನ್ ಭಾರತದಲ್ಲಿಯೇ ಉಳಿದುಕೊಳ್ಳಲಿದ್ದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗಲಿದ್ದಾರೆ. ಅದಾದ ಬಳಿಕ ಐಪಿಎಲ್‌ನಲ್ಲಿ ಆಡುವ ಸಲುವಾಗಿ ಭಾರತದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಗ್ರೀನ್ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.