ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಶುಕ್ರವಾರದಿಂದಲೇ ಈ ಸರಣಿ ಆರಂಭವಾಗಲಿದ್ದು ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿರುವ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದಿಳಿದಿದೆ. ಈ ಮೂಲಕ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡ ತನ್ನ ಕೊಎಯ ಹಂತದ ಸಿದ್ಧತೆಯನ್ನು ಜೋರಾಗಿ ನಡೆಸುತ್ತಿದೆ.
ಆಸ್ಟ್ರೇಲಿಯಾ ತಂಡ ಇದೀಗ ಭಾರತಕ್ಕೆ ಬಂದಿಳಿದಿದ್ದು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭಾರತಕ್ಕೆ ಮತ್ತೆ ಬಂದಿಳಿದ ವಿಚಾರವಾಗಿ ತಮ್ಮ ಉತ್ಸುಕತೆಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಭಾರತದಲ್ಲಿ ಅದ್ಭುತವಾದ ಸ್ವಾಗತ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಡೇವಿಡ್ ವಾರ್ನರ್.

ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಿತ್ತು. ಈ ಸರಣಿಯನ್ನು 2-3 ಅಂತರದಿಂದ ಆಸ್ಟ್ರೇಲಿಯಾ ತಂಡ ಕಳೆದುಕೊಂಡಿತು. ಭಾನುವಾರ ಈ ಸರಣಿ ಅಂತ್ಯವಾದ ಬಳಿಕ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಿದ್ದು ಇಲ್ಲಿ ವಿಶ್ವಕಪ್ ಟೂರ್ನಿಗೂ ಮುನ್ನ ತನ್ನ ಕೊನೆಯ ದ್ವಿಪಕ್ಷೀಯ ಸರಣಿಯಲ್ಲಿ ಭಾಗುಯಾಗಲಿದೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದ್ದು ಮೊದಲ ಪಂದ್ಯ ಮೊಹಾಲಿಯಲ್ಲಿ ಸೆಪ್ಟೆಂಬರ್ 22ರಂದು ಆಯೋಜನೆಯಾಗಲಿದೆ. ಎರಡನೇ ಪಂದ್ಯ ಇಂದೋರ್‌ನಲ್ಲಿ ಸೆಪ್ಟೆಂಬರ್ 24ರಂದು ನಡೆಯಲಿದ್ದು ಕೊನೆಯ ಪಂದ್ಯ ಸೆಪ್ಟೆಂಬರ್ 27ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ.
"ಭಾರತಕ್ಕೆ ಮರಳಿ ಸ್ವಾಗತವನ್ನು ಸ್ವೀಕರಿಸುವುದು ಯಾವಾಗಲೂ ಅದ್ಭಯು ಅನುಭವ. ನಮ್ಮನ್ನು ಇಲ್ಲಿ ಯಾವಾಗಲೂ ಅದ್ಭುತವಾಗಿ ಹಾಗೂ ಸುರಕ್ಷಿತವಾಗಿ ನೋಡಿಕೊಳ್ಳಲಾಗುತ್ತದೆ" ಎಂಡು ಡೇವಿಡ್ ವಾರ್ನರ್ ಇನ್‌ಸ್ಟಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭದ್ರತಾ ಸಿಬ್ಬಂದಿಯೊಬ್ಬರ ಜೊತೆಗೆ ಫೊಸ್ ನೀಡಿರುವ ಫೋಟೋ ಹಂಚಿಕೊಂಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ತಂಡದ ಸಹ ಆಟಗಾರರಾದ ಮಾರ್ನಸ್ ಲ್ಯಾಬುಶೇನ್ ಹಾಗೂ ಆಲ್‌ರೌಂಡರ್ ಮಿಚೆಲ್ ಮಾರ್ಶ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದರು.
ಭಾರತ ವಿರುದ್ಧದ 3 ಪಂದ್ಯಗಳ ಸರಣಿಗೆ ಆಸ್ಟ್ರೇಲಿಯಾ 18 ಮಂದಿಯ ತಂಡವನ್ನು ಹೆಸರಿಸಿದೆ. ಆದರೆ ಕೈ ಗಾಯಕ್ಕೆ ತುತ್ತಾಗಿರುವ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಭಾರತದ ವಿರುದ್ಧದ ತಂಡದ ಭಾಗವಾಗಿಲ್ಲ.ಅಲ್ಲದೆ ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ವಿಶ್ವಕಪ್ ಟೂರ್ನಿಯ ಆರಂಭಿಕ ಕೆಲ ಪಂದ್ಯಗಳಿಂದಲೂ ಹೆಡ್ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.