
ಏಷ್ಯಾ ಕಪ್ ಮುಕ್ತಾಯವಾಗುತ್ತಿದ್ದಂತೆಯೇ ಭಾರತ ತಂಡ ಮತ್ತೊಂದು ಪ್ರಮುಖ ಟಿ20 ಸರಣಿಗೆ ಸಜ್ಜಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ಆತಿಥ್ಯ ವಹಿಸಲಿದೆ. ಈ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಐಪಿಎಲ್‌ನಲ್ಲಿ ಮಿಂಚುವ, ಭಾರತದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಆಸಿಸ್ ಆಟಗಾರನಿಗೆ ವಿಶ್ರಾಂತಿ ನೀಡಲಾಗಿದೆ.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಈ ಪ್ರವಾಸದಿಂದ ಹೊರಗುಳಿದಿದ್ದು ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಸೆಪ್ಟೆಂಬರ್ 20ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಡೇವಿಡ್ ವಾರ್ನರ್ ಭಾಗವಹಿಸುವುದಿಲ್ಲ. ಟಿ20 ವಿಶ್ವಕಪ್ ತಂಡದಲ್ಲಿ ಡೇವಿಡ್ ವಾರ್ನರ್ ಇದ್ದರು ಕೂಡ ಈ ಭಾರತದ ಪ್ರವಾಸದಲ್ಲಿ ವಾರ್ನರ್ ಬದಲಿಗೆ ಕ್ಯಾಮರೂನ್ ಗ್ರೀನ್‌ಗೆ ಸ್ಕ್ವಾಡ್‌ನಲ್ಲಿ ಅವಕಾಶ ನೀಡಲಾಗಿದೆ.
ಮೂರು ಪಂದ್ಯಗಳ ಸರಣಿ
ಸೆಪ್ಟೆಂಬರ್ 20ರಿಂದ ಈ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಮೊದಲ ಪಂದ್ಯಕ್ಕೆ ಮೊಹಾಲಿ ಆತಿಥ್ಯವಹಿಸಿಕೊಳ್ಳಲಿದ್ದು ಸೆಪ್ಟೆಂಬರ್ 23ರಂದು ನಡೆಯಲಿರುವ ಎರಡನೇ ಪಂದ್ಯ ನಾಗ್ಪುರದಲ್ಲಿ ಹಾಗೂ ಮೂರನೇ ಪಂದ್ಯ ಸೆಪ್ಟೆಂಬರ್ 2ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.
ಜಿಂಬಾಬ್ವೆ ಸರಣಿಯಲ್ಲಿ ಮಿಂಚಿರುವ ವಾರ್ನರ್
ಡೇವಿಡ್ ವಾರ್ನರ್ ಇತ್ತೀಚೆಗಷ್ಟೇ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ 57 ಮತ್ತು 13 ರನ್ ಗಳಿಸಿದ್ದರು. ಇನ್ನು ಈ ತಿಂಗಳ ಆರಂಭದಲ್ಲಿ ವಾರ್ನರ್ ಬಿಬಿಎಲ್‌ನ ಫ್ರಾಂಚೈಸಿ ಸಿಡ್ನಿ ಥಂಡರ್‌ನೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಬಿಗ್ ಬ್ಯಾಷ್ ಲೀಗ್(BBL)ನಿಂದ ಅವರ ಒಂಬತ್ತು ವರ್ಷಗಳ ಅನುಪಸ್ಥಿತಿ ಅಂತ್ಯವಾಗಲಿದೆ. ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸಿಡ್ನಿ ಟೆಸ್ಟ್‌ನ ಮುಕ್ತಾಯದ ಬಳಿಕ ವಾರ್ನರ್ ಥಂಡರ್‌ಗೆ ಸೇರುತ್ತಾರೆ. ಅವರು ಸಿಕ್ಸರ್ಸ್ ವಿರುದ್ಧದ ಸಿಡ್ನಿ ಸ್ಮ್ಯಾಶ್ ಮತ್ತು ಫೈನಲ್ಸ್ ಸೇರಿದಂತೆ ಐದು ಪಂದ್ಯಗಳಿಗೆ ಲಭ್ಯವಿರುವ ಸಾಧ್ಯತೆಯಿದೆ.
ಕ್ಯಾಮರೂನ್ ಗ್ರೀನ್ ಬಗ್ಗೆ ಆಯ್ಕೆ ಮಂಡಳಿ ವಿಶ್ವಾಸ: ಇನ್ನು ಈ ತಂಡದ ಆಯ್ಕೆಯ ಬಳಿಕ ಆಸ್ಟ್ರೇಲಿಯಾದ ರಾಷ್ಟ್ರೀಯ ಆಯ್ಕೆ ಮಂಡಳಿಯ ಮುಖ್ಯಸ್ಥ ಜಾರ್ಜ್ ಬೈಲಿ ಮಾತನಾಡಿದ್ದಾರೆ. "ಅವರ ಆಟದ ದೃಷ್ಟಿಯಿಂದ ಕ್ಯಾಮರೂನ್ ಅವರ ಬೆಳವಣಿಗೆ ಸಾಕಷ್ಟು ಖುಷಿ ನೀಡುತ್ತದೆ. ಟಿ20 ಮಾದರಿಗೆ ಮತ್ತಷ್ಟು ಒಗ್ಗಿಕೊಳ್ಳುವ ನಿಟ್ಟಿನಲ್ಲಿ ಮತ್ತಷ್ಟು ಅವಕಾಶಗಳನ್ನು ನೀಡುವುದು ನಮ್ಮ ಆದ್ಯತೆಯಾಗಿದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಜಾರ್ಜ್ ಬೈಲಿ.
ಭಾರತ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಆಸಿಸ್ ಪಡೆ: ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್ (ಉಪ ನಾಯಕ), ಟಿಮ್ ಡೇವಿಡ್, ಆರನ್ ಫಿಂಚ್ (ನಾಯಕ), ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಕ್ಯಾಮೆರಾನ್ ಗ್ರೀನ್, ಆಡಮ್ ಝಂಪಾ.