
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಗಾಯದ ಮಧ್ಯೆಯೂ ಬ್ಯಾಟಿಂಗ್ ನಡೆಸಿದ ಹನುಮ ವಿಹಾರಿ ಪಂದ್ಯ ಡ್ರಾ ಮಾಡಿಕೊಳ್ಳಲು ಕಾರಣರಾದರು. ಹನುಮ ವಿಹಾರಿ ಅವರ ಗಾಯದ ಬಗ್ಗೆ ಸ್ಪಷ್ಟತೆಯನ್ನು ಪಡೆದುಕೊಳ್ಳಲು ಸ್ಕ್ಯಾನಿಂಗ್ ನಡೆಸಲಾಗಿದ್ದು ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಸ್ಕ್ಯಾನಿಂಗ್ ವರದಿ ಇನ್ನಷ್ಟೇ ಲಭ್ಯವಾಗಬೇಕಿದ್ದು ಇದರ ಆಧಾರದಲ್ಲಿ ಎಷ್ಟು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂಬುದು ತಿಳಿಯಲಿದೆ. ಸದ್ಯದ ಮಾಹಿತಿಯ ಪ್ರಕಾರ ಫೆಬ್ರವರಿ ಮೊದಲ ವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಿಂದಲೂ ಹನುಮವಿಹಾರಿ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ.
ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಹನುಮ ವಿಹಾರಿ ಅಲಭ್ಯರಾಗಿರುವ ಕಾರಣ ತಂಡದ ಹೊಂದಾಣಿಕೆಯಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳಬೇಕಿದೆ. ಈಗಿನ ಪ್ರಕಾರ ಎರಡು ಅವಕಾಶಗಳು ತಂಡದ ಮುಂದಿದ್ದು ವೃದ್ಧಿಮಾನ್ ಸಾಹಾ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದು ರಿಷಭ್ ಪಂತ್ ಕೇವಲ ಬ್ಯಾಟಿಂಗ್ ಸ್ಪೆಶಲಿಸ್ಟ್ ಆಗಿ ಕಣಕ್ಕಿಳಿಯಬಹುದು. ಇಲ್ಲವಾದಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಹನುಮ ವಿಹಾರಿ ಅಲಭ್ಯತೆ ದೊಡ್ಡ ಮಟ್ಟದಲ್ಲಿ ಕಾಡುವ ಸಾರ್ಧಯತೆಯಿಲ್ಲ. ತವರಿನಲ್ಲಿ ನಡೆಯುವ ಪಂದ್ಯವಾಗಿರುವ ಕಾರಣ ಓರ್ವ ಹೆಚ್ಚುವರಿ ಬೌಲರ್‌ಅನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹೀಗಾಗಿ ತಂಡದಲ್ಲಿದ್ದರೂ ಆಡುವ ಬಳಗದಲ್ಲಿ ತವರಿನಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿಲ್ಲ.