
ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಭಾರತ ತಂಡದ ವಿರುದ್ಧ ಯಾವಾಗಲೂ ಅದ್ಭುತವಾಗಿ ಪ್ರದರ್ಶನವನ್ನು ನೀಡುತ್ತಾರೆ. ಇದು ಈ ಬಾರಿಯ ಏಕದಿನ ಸರಣಿಯಲ್ಲೂ ಮುಂದುವರಿದಿದೆ. ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸ್ಟೀವ್ ಸ್ಮಿತ್ ವಿಕೆಟ್ ಪಡೆಯಲು ಪರದಾಡಿದ ಭಾರತೀಯ ಬೌಲರ್‌ಗಳಿಗೆ ಕಂಟಕವಾಗಿದ್ದಾರೆ. ಸರಣಿಯ ಎರಡು ಪಂದ್ಯಗಳಲ್ಲಿ ಸ್ಮಿತ್ ಎರಡು ಶತಕವನ್ನು ಬಾರಿಸಿ ಮಿಂಚಿದ್ದಾರೆ.
ಸ್ಟೀವ್ ಸ್ಮಿತ್ ವಿಕೆಟ್ ಪಡೆಯುವುದು ಹೇಗೆ ಎಂಬುದು ಭಾರತೀಯ ಬೌಲರ್‌ಗಳಿಗೆ ಕಗ್ಗಂಟಾಗಿದೆ. ಇದಕ್ಕೆ ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಸಲಹೆಯನ್ನು ನೀಡಿದ್ದಾರೆ. ಟೀಮ್ ಇಂಡಿಯಾ ಈ ಕ್ರಮವನ್ನು ಅನುಸರಿಸಿದರೆ ಆಸಿಸ್ಸ್ನ ಬ್ಯಾಟರ್‌ಅನ್ನು ಶೀಘ್ರವಾಗಿ ಫೆವಿಲಿಯನ್‌ಗೆ ಕಳುಹಿಸಬಹುದು ಎಂದಿದ್ದಾರೆ.
ಸ್ಟೀವ್ ಸ್ಮಿತ್ ಬ್ಯಾಟಿಂಗ್‌ಗೆ ಇಳಿದಾಗ ಸ್ಪಿನ್ ಬೌಲಿಂಗ್ ದಾಳಿಯನ್ನು ಹೆಚ್ಚಾಗಿ ಬಳಸಿಕೊಂಡರೆ ಆತನ ವಿಕೆಟ್ ಪಡೆಯಬಹದು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಸ್ಟೀವ್ ಸ್ಮಿತ್ ಸ್ಪಿನ್ ಬೌಲರ್‌ಗಳ ವಿರುದ್ಧ ಆಡುವುದನ್ನು ನೋಡಲು ನಾನು ಬಯಸುತ್ತೇನೆ ಎಂದಿದ್ದಾರೆ ಹರ್ಭಜನ್ ಸಿಂಗ್.
ಸ್ಟೀವ್ ಸ್ಮಿತ್ ಬ್ಯಾಟಿಂಗ್‌ಗೆ ಇಳಿಯುವ ವೇಳೆ ಯುಜುವೇಂದ್ರ ಚಾಹಲ್ ಅಥವಾ ಕುಲ್‌ದೀಪ್ ಯಾದವ್ ಬೌಲಿಂಗ್ ದಾಳಿಗೆ ಇಳಿಯಬೇಕು. ನಿರಂತರವಾಗಿ ಏಳರಿಂದ ಎಂಟು ಓವರ್‌ಗಳ ಸ್ಪಿನ್ ದಾಳಿಯನ್ನು ನಡೆಸುವ ಮೂಲಕ ಆತನ ವಿಕೆಟ್ ಪಡೆಯುವುದು ಸಾಧ್ಯವಾಗಲಿದೆ ಎಂದು ಅವರು ಹೇಳಿಕೆಯನ್ನು ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಯುಜುವೇಂದ್ರ ಚಾಹಲ್‌ಗೆ ಹರ್ಭಜನ್ ಸಿಂಗ್ ಸಲಹೆಯೊಂದನ್ನು ನೀಡಿದ್ದಾರೆ. "ವಿರಾಟ್ ಕೊಹ್ಲಿ ಹೇಳಿದಂತೆ ಆಸ್ಟ್ರೇಲಿಯಾದ ಆಟಗಾರರಿಗೆ ಅಲ್ಲಿನ ಪಿಚ್ ಬಗ್ಗೆ ಇತರರಿಗಿಂತ ಉತ್ತಮವಾಗಿ ಅರಿವಿರುತ್ತದೆ. ಹಾಗಾಗಿ ಚಾಹಲ್ ವಿರುದ್ಧದ ಅವಕಾಶವನ್ನು ಅವರು ಬಳಸಿಕೊಳ್ಳುತ್ತಿದ್ದಾರೆ. ಆತನಿಗೆ ಕಠಿಣ ಪರಿಶ್ರಮವನ್ನು ಪಡು ಹಾಗೂ ಸ್ವಲ್ಪ ನಿಧಾನಗತಿಯಲ್ಲಿ ಬೌಲಿಂಗ್ ಮಾಡುವಂತೆ ಸಲಹೆಯನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.