
ಸೇಲಂ: ಭಾರತದ ವೇಗಿ ಟಿ ನಟರಾಜನ್ ಎಷ್ಟು ಪ್ರತಿಭಾವಂತ ಅನ್ನೋದಕ್ಕೆ ಕಳೆದೆರಡು ತಿಂಗಳುಗಳ ಅವರ ಪ್ರದರ್ಶನ ಸಾಕ್ಷಿ ಹೇಳಿವೆ. ಐಪಿಎಲ್‌ನಲ್ಲಿ ಯಾರ್ಕರ್ ಸ್ಪೆಶಾಲಿಸ್ಟ್ ಆಗಿ ಮಿನುಗಿದ್ದ ನಟರಾಜನ್, ಆಸ್ಟ್ರೇಲಿಯಾ ಪ್ರವಾಸದಲ್ಲಿ ಅತ್ಯುತ್ತಮ ಬೌಲರ್ ಆಗಿ ಗಮನ ಸೆಳೆದಿದ್ದರು, ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲಲು ಕಾರಣರಾಗಿದ್ದರು.
ಆಸ್ಟ್ರೇಲಿಯಾ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ಹೋಗಿದ್ದ ನಟರಾಜನ್ ಮೂರೂ ಮಾದರಿಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು ಅನ್ನೋದು ವಿಶೇಷ. ಮೂರು ಕ್ರಿಕೆಟ್ ಮಾದರಿಗಳಲ್ಲಿ ಪಾದಾರ್ಪಣೆ ಮಾಡಿದ್ದಷ್ಟೇ ಅಲ್ಲ, ಉತ್ತಮ ಪ್ರದರ್ಶನವೂ ನೀಡಿದ್ದರು.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವಾಗ ನಟರಾಜನ್ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಈ ಅಪೂರ್ವ ಕ್ಷಣ ಪತ್ನಿಯ ಜೊತೆಗಿರಲು ನಟರಾಜನ್‌ಗೆ ಸಾಧ್ಯವಾಗಿರಲಿಲ್ಲ. ಯಾಕೆಂದರೆ ಬಡತನದ ಕುಟುಂಬದ ನಟರಾಜನ್‌ಗೆ ಅವಕಾಶವನ್ನು ಕೈ ಬಿಡಲಾರದ ಅನುವಾರ್ಯತೆಯಿತ್ತು. ಪ್ರವಾಸ ಸರಣಿಯ ಬಳಿಕ ಈಗ ನಟರಾಜನ್ ತನ್ನ ಕುಟುಂಬದ ಜೊತೆಗಿದ್ದಾರೆ.
ಭಾನುವಾರ ನಡೆದ ಸಂವಾದದಲ್ಲಿ ಮಾತನಾಡಿದ ನಟರಾಜ್, 'ಆಸ್ಟ್ರೇಲಿಯಾ ಪ್ರವಾಸ ನನ್ನ ಪಾಲಿಗೆ ಕನಸಿನ ಪ್ರವಾಸವಾಗಿತ್ತು. ಇನ್ನೂ ಸಾಧಿಸಬೇಕು. ಟೀಮ್ ಇಂಡಿಯಾದಲ್ಲಿ ಒಳ್ಳೆಯ ಸ್ಥಾನ ಪಡೆದುಕೊಳ್ಳಬೇಕು. ನಾನು ಇನ್ನೂ ಒಂದಿಷ್ಟು ಮೈಲುಗಳನ್ನು ಸಾಗೋದಿದೆ,' ಎಂದಿದ್ದಾರೆ.