ಭಾರತ vs ಆಸ್ಟ್ರೇಲಿಯಾ: 2ನೇ ಟಿ20 ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡ ಟೀಮ್ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯವನ್ನು ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಚುಟುಕು ಸರಣಿಯನ್ನು ಇನ್ನೂ ಒಂದು ಪಂದ್ಯ ಇರುವಂತೆಯೇ ಭಾರತ ಗೆದ್ದು ಬೀಗಿದೆ. ಏಕದಿನ ಸರಣಿಯ ಸೋಲನ್ನು ಈ ಮೂಲಕ ಭರ್ಜರಿಯಾಗಿಯೇ ತೀರಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಟೀಮ್ ಇಂಡಿಯಾಗೆ 195 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಇದನ್ನು ಬೆನ್ನಟ್ಟಿದ ಭಾರತ ಇನ್ನೂ ಎರಡು ಎಸೆತಗಳು ಇರುವಂತೆಯೇ ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ಅಂತಿಮವಾಗಿ ಹಾರ್ದಿಕ್ ಪಾಂಡ್ಯ ಎರಡು ಸಿಕ್ಸರ್ ಸಿಡಿಸಿ ಗೆಲುವನ್ನು ಖಚಿತಪಡಿಸಿದರು. ಈ ಮೂಲಕ ಟಿ20 ಸರಣಿಯನ್ನು ಭಾರತ ಆಸ್ಟ್ರೇಲಿಯಾ ನೆಲದಲ್ಲಿ ಎರಡನೇ ಬಾರಿಗೆ ವಶಪಡಿಸಿಕೊಂಡಂತಾಗಿದೆ.

ಬೃಹತ್ ಮೊತ್ತದ ಗುರಿ ನೀಡಿದ ಆಸಿಸ್
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಗೆ ನಾಯಕ ಮ್ಯಾಥ್ಯೂ ವೇಡ್ ಉತ್ತಮ ಆರಂಭವನ್ನು ನೀಡಿದರು. 32 ಎಸೆತಗಳಲ್ಲಿ 58 ರನ್ ಸಿಡಿದ ನಾಯಕ ವೇಡ್‌ಗೆ ಸ್ಟೀವ್ ಸ್ಮಿತ್ ಕೂಡ ಸಾಥ್ ನಿಡಿದರು. ಸ್ಮಿತ್ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಂತಿಮ ಹಂತದಲ್ಲಿ ಮ್ಯಾಕ್ಸ್‌ವೆಲ್, ಹೆನ್ರಿಕ್ಸ್, ಸ್ಟೋಯ್ನಿಸ್ ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 194ಕ್ಕೇರಿಸುವಲ್ಲಿ ಯಶಸ್ವಿಯಾದರು.

ಭಾರತದ ಉತ್ತಮ ಆರಂಭ
ಆಸ್ಟ್ರೇಲಿಯಾ ನೀಡಿದ ಈ ಬೃಹತ್ ಮೊತ್ತವನ್ನು ಭಾರತ ಉತ್ತಮವಾಗಿ ಬೆನ್ನಟ್ಟಲು ಆರಂಭಿಸಿತು. ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ ಅರ್ಧ ಶತಕದ ಜೊತೆಯಾಟವನ್ನು ನೀಡಿದರು. ಕೆಎಲ್ ರಾಹುಲ್ 30 ರನ್ ದಾಖಲಿಸಿದರೆ ಶಿಖರ್ ಧವನ್ 52 ರನ್ ಸಿಡಿಸಿ ಮಿಂಚಿದರು.
ನಾಯಕನ ಆಟವಾಗಿದ ಕೊಹ್ಲಿ
ಇನ್ನು ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 24 ಎಸೆತಗಳಲ್ಲಿ 40 ರನ್ ಸಿಡಿಸುವ ಮೂಲಕ ಭಾರತದ ರನ್ ಬೆನ್ನಟ್ಟುವಿಕೆಗೆ ಮತ್ತಷ್ಟು ವೇಗವನ್ನು ನೀಡಿದರು. ಆದರೆ ವೈಡ್‌ನತ್ತ ಸಾಗುತ್ತಿದ್ದ ಡೇನಿಯಲ್ ಸ್ಯಾಮ್ಸ್ ಎಸೆತವನ್ನು ಕೆಣಕಿ ವಿಕೆಟ್ ಒಪ್ಪಿಸಿದರು. ಸಂಜು ಸ್ಯಾಮ್ಸನ್ 15 ರನ್ ಗಳಿಸಿ ಔಟಾದರು.

ಮತ್ತೊಮ್ಮೆ ಮ್ಯಾಚ್ ವಿನ್ನರ್ ಆದ ಪಾಂಡ್ಯ
ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಎರಡನೇ ಟಿ20 ಪಂದ್ಯದಲ್ಲೂ ಮ್ಯಾಚ್ ವಿನ್ನರ್ ಎನಿಸಿಕೊಂಡರು. 22 ಎಸೆತ ಎದುರಿಸಿದ ಪಾಂಡ್ಯ 42 ರನ್ ಸಿಡಿಸಿ ಗೆಲುವಿಗೆ ಮುಖ್ಯ ಕಾರಣರಾದರು. ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿ ಗೆಲುವನ್ನು ಸಾರಿದರು. ಶ್ರೇಯಸ್ ಐಯ್ಯರ್ ಕೂಡ ಪಾಂಡ್ಯಗೆ ಉತ್ತಮ ಸಾಥ್ ನೀಡಿದರು. ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಐಯ್ಯರ್ 5 ಎಸೆತಗಳಲ್ಲಿ 12 ರನ್ ಬಾರಿಸಿದರು. ಈ ರೀತಿಯಾಗಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಚುಟುಕು ಸರಣಿಯನ್ನು ಗೆದ್ದುಕೊಂಡಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications