
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ತಂಗರಸು ನಟರಾಜನ್ ಟೀಮ್ ಇಂಡಿಯಾಗೆ ಪದಾರ್ಪಣೆಯನ್ನು ಮಾಡಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಟಿ ನಟರಾಜನ್ ನಾಯಕ ವಿರಾಟ್ ಕೊಹ್ಲಿಯಿಂದ ಟೀಮ್ ಇಂಡಿಯಾದ ಕ್ಯಾಪ್ ಪಡೆದುಕೊಂಡರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ 232ನೇ ಆಟಗಾರನೆನಿಸಿದ್ದಾರೆ.
ಮೊದಲಿಗೆ ಟೀಮ್ ಇಂಡಿಯಾದ ಟಿ20 ತಂಡಕ್ಕೆ ಆಯ್ಕೆಯಾಗಿದ್ದ ವರುಣ್ ಚಕ್ರವರ್ತಿ ಗಾಯಗೊಂಡ ಕಾರಣ ಆ ಸ್ಥಾನಕ್ಕೆ ಟಿ ನಟರಾಜನ್ ಟಿ20 ತಂಡಕ್ಕೆ ಆಯ್ಕೆಯಾಗಿ ಮೊದಲ ಬಾರಿಗೆ ಭಾರತ ತಂಡದ ಪರವಾಗಿ ಕಣಕ್ಕಿಳಿಯಲು ಕರೆಯನ್ನು ಪಡೆದರು. ಬಳಿಕ ಆಸ್ಟ್ರೇಲಿಯಾಗೆ ಟೀಮ್ ಇಂಡಿಯಾ ಬಂದಿಳಿದ ಬಳಿ ಏಕದಿನ ತಂಡಕ್ಕೂ ಟಿ ನಟರಾಜನ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಆಸಿಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ನಟರಾಜನ್ ಪದಾರ್ಪಣೆಯನ್ನೂ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳು ನಾಡು ಮೂಲದ ನಟರಾಜನ್ ಯುಎಇನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಈ ಬಾರಿ ಅದ್ಭುತ ಯಶಸ್ಸು ಸಾಧಿಸಿದರು. ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಕಣಕ್ಕಿಳಿದಿದ್ದ ನಟರಾಜನ್ ತಮ್ಮ ನಿಖರವಾದ ಯಾರ್ಕರ್ ದಾಳಿಯ ಮೂಲಕ ಎಲ್ಲರ ಗಮನ ಸೆಳೆದರು. ಈ ಮೂಲಕ ಟೀಮ್ ಇಂಡಿಯಾದ ಕದ ತಟ್ಟುವಲ್ಲೂ ಯಶಸ್ವಿಯಾದರು.
ತಮಿಳು ನಾಡಿನ ಸೇಲಂನವರಾದ ನಟರಾಜನ್ ಟೆನ್ನಿಸ್ ಬಾಲ್‌ನ ಟೂರ್ನಿಯೊಂದರಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದರು. ಇದರ ಆಧಾರದಲ್ಲಿ ತಮಿಳುನಾಡಿನ ಟಿ20 ಲೀಗ್ 'ತಮಿಲ್‌ನಾಡು ಪ್ರೀಮಿಯರ್ ಲೀಗ್'ನಲ್ಲಿ 2017ರ ಆವೃತ್ತಿಯಲ್ಲಿ ಅವಕಾಶವನ್ನು ಪಡೆದುಕೊಂಡರು. ಅಲ್ಲಿ ಸಾಧಿಸಿದ ಯಶಸ್ಸು ಅವರನ್ನು ಐಪಿಎಲ್‌ಗೆ ಆಯ್ಕೆಯಾಗುವಂತೆ ಮಾಡಿತ್ತು.
2018ರಲ್ಲೇ ನಟರಾಜನ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದರು. ಆದರೆ 2020ರ ಟೂರ್ನಿಯಲ್ಲಿ ನಟರಾಜನ್ ಆಡುವ ಬಳಗದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡರು. ಯಾರ್ಕರ್ ಪ್ರಮುಖ ಅಸ್ತ್ರವಾಗೊರುವ ನಟರಾಜನ್ ಸತತವಾಗಿ ಯಾರ್ಕರ್ ಎಸೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.