
ಸಿಡ್ನಿ: ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಗಾಯಕ್ಕೀಡಾಗಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಕ್ರವಾರ ನಡೆದ ಭಾರತ ವಿರುದ್ಧದ ಮೊದಲನೇ ಏಕದಿನ ಪಂದ್ಯದ ವೇಳೆ ಸ್ಟೋಯ್ನಿಸ್ ಸೈಡ್ ಸ್ಟ್ರೇನ್‌ಗೆ (ಹೊಟ್ಟೆ, ಸೊಂಟದ ಬದಿಯಲ್ಲಿ ನೋವು) ಒಳಗಾಗಿದ್ದಾರೆ.
ಮೂರು ಏಕದಿನ ಪಂದ್ಯಗಳ ಸರಣಿಯ ಆರಂಭಿಕ ಪಂದ್ಯದ ವೇಳೆ ಭಾರತ ಚೇಸಿಂಗ್‌ಗೆ ಇಳಿದಿದ್ದಾಗ ತನ್ನ 7ನೇ ಓವರ್ 2ನೇ ಎಸೆತ ಎಸೆಯುತ್ತಿದ್ದಾಗ ಮಾರ್ಕಸ್ ಸ್ಟೋಯ್ನಿಸ್‌ಗೆ ನೋವು ಕಾಡಿತ್ತು. ಆ ಬಳಿಕ ಸ್ಟೋಯ್ನಿಸ್ ಮೈದಾನದಿಂದ ಹೊರ ನಡೆದರು. ಸ್ಟೋಯ್ನಿಸ್ ಓವರ್ ಅನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಪೂರ್ಣಗೊಳಿಸಿದ್ದರು.
ಕ್ರಿಕೆಟ್ ಡಾಟ್ ಕಾಮ್ ಕಾಟ್ ಎಯು ಪ್ರಕಾರ, 31ರ ಹರೆಯದ ಸ್ಟೋಯ್ನಿಸ್ ದೇಹದ ಎಡಭಾಗದಲ್ಲಿ ಗಾಯಕ್ಕೀಡಾಗಿದ್ದಾರೆ. ಗಾಯದ ಸ್ಥಿತಿ ಪರೀಕ್ಷೆಗೆ ಸ್ಕ್ಯಾನ್ ಮಾಡಿಕೊಳ್ಳಲಿದ್ದಾರೆ. ಹೀಗಾಗಿ ನವೆಂಬರ್ 29ರಂದು ನಡೆಯುವ ಎರಡನೇ ಏಕದಿನ ಪಂದ್ಯದ ವೇಳೆ ಸ್ಟೋಯ್ನಿಸ್ ಮೈದಾನಕ್ಕಿಳಿಯೋದು ಅನುಮಾನ.
ಇತ್ತಂಡಗಳ ಮೊದಲನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 66 ರನ್‌ನಿಂದ ಗೆದ್ದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ, 50 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 374 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ವಿರಾಟ್ ಕೊಹ್ಲಿ ಪಡೆ, 50 ಓವರ್‌ಗೆ 8 ವಿಕೆಟ್ ಕಳೆದು 308 ರನ್ ಗಳಿಸಿತು.