
ನಾಗ್ಪುರ, ಮಾರ್ಚ್ 5: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಬಳಗ ಇಂದು (ಮಾರ್ಚ್ 5) ಎರಡನೇ ಏಕದಿನ ಪಂದ್ಯವನ್ನಾಡುತ್ತಿದೆ. ಭಾರತ ಒಂದು ವೇಳೆ ಈ ಪಂದ್ಯವನ್ನು ಗೆದ್ದುಬಿಟ್ಟರೆ ಟೀಮ್ ಇಂಡಿಯಾ ಹೊಸ ದಾಖಲೆಗೆ ಕಾರಣವಾಗಲಿದೆ. ಯಾಕೆಂದರೆ ಇದು ಭಾರತ ಕ್ರಿಕೆಟ್ ತಂಡದ 500ನೇ ಅಂತಾರಾಷ್ಟ್ರೀಯ ಏಕದಿನ ಗೆಲುವಾಗಿ ಗುರುತಿಸಿಕೊಳ್ಳಲಿದೆ.
ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಭಾರತ ತಂಡ 1975ರಲ್ಲಿ ಈಸ್ಟ್ ಆಫ್ರಿಕಾ ವಿರುದ್ಧ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಗೆದ್ದಿತ್ತು. ಅದಾಗಿ ಇಲ್ಲೀವರೆಗೆ ಒಟ್ಟು 962 ಪಂದ್ಯಗಳಲ್ಲಿ 499 ಪಂದ್ಯಗಳನ್ನು ಭಾರತ ಗೆದ್ದಿದೆ. ಇಂದು ಕಣಕ್ಕಿಳಿಯುತ್ತಿರುವ ಆಸ್ಟ್ರೇಲಿಯಾ 923 ಪಂದ್ಯಗಳಲ್ಲಿ 558 ಏಕದಿನ ಪಂದ್ಯಗಳಲ್ಲಿ ಗೆಲುವಿನ ದಾಖಲೆ ಹೊಂದಿದೆ.
ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಸ್ಟೇಡಿಯಂನಲ್ಲಿ ಇಂದು ಭಾರತ ಗೆದ್ದರೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆ ಪಡೆಯಲಿದೆ. ಅಂದ್ಹಾಗೆ ವಿಸಿಎ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಚೊಚ್ಚಲ ಮುಖಾಮುಖಿಯಾಗಿದ್ದು 28 ಅಕ್ಟೋಬರ್ 2009ರಲ್ಲಿ.
ಮೊದಲ ಮುಖಾಮುಖಿಯ ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, 7 ವಿಕೆಟ್ ಕಳೆದು 354 ರನ್ ಬಾರಿಸಿತ್ತು. ಅಂದು ತಂಡವನ್ನು ಮುನ್ನಡೆಸಿದ್ದ ಎಂಎಸ್ ಧೋನಿ 107 ಎಸೆತಗಳಿಗೆ 124 ರನ್ ಚಚ್ಚಿದ್ದರು. ಆದರೆ ಆಸ್ಟ್ರೇಲಿಯಾ 255 ರನ್ ಗೆ ಇನ್ನಿಂಗ್ಸ್ ಮುಗಿಸಿದ್ದರಿಂದ ಭಾರತ 99 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಇಂದೂ ಕೂಡ ಭಾರತ ಗೆಲ್ಲಲೆಂದು ಹಾರೈಸೋಣ.