ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಗೆಲುವು ಸಾಧಿಸಿದ ಬಳಿಕ ಎರಡನೇ ಪಂದ್ಯ ಇಂದೋರ್‌ನ ಹೊಲ್ಕೆರೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯ ಗೆದ್ದಿರುವ ಭಾರತ ಎರಡನೇ ಪಂದ್ಯವನ್ನೂ ಗೆದ್ದರ ಸರಣಿಯನ್ನು ವಶಕ್ಕೆ ಪಡೆಯುವ ಲೆಕ್ಕಾಚಾರದಲ್ಲಿದೆ.
ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿತ್ತು. ಅದರಲ್ಲೂ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ನೀಡಿದ ಪ್ರದರ್ಶನ ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಬ್ಯಾಟಿಂಗ್‌ನಲ್ಲಿ ಶುಬ್ಮನ್ ಗಿಲ್ ರನ್‌ಮಳೆ ಹರಿಸುವುದನ್ನು ಮುಂದುವರಿಸಿದ್ದರೆ ಋತುರಾಜ್ ಗಾಯಕ್ವಾಡ್ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಇನ್ನು ಕೆಎಲ್ ರಾಹುಲ್ ಕೂಡ ಏಷ್ಯಾಕಪ್‌ನ ಫಾರ್ಮ್ ಮುಂದುವರಿಸಿದ್ದರೆ ಸೂರ್ಯಕುಮಾರ್ ಈ ಪಂದ್ಯದಲ್ಲಿ ತಮ್ಮ ಫಾರ್ಮ್ ಕಂಡುಕೊಂಡಿದ್ದು ಅರ್ಧಶತಕ ಸಿಡಿಸಿದ್ದರು.

ಇನ್ನು ಎರಡು ತಂಡಗಳು ಕೂಡ ಈ ಪಂದ್ಯದಲ್ಲಿ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತರಿ ನೀಡಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್ ಹಾಗೂ ಕುಲ್‌ದೀಪ್ ಯಾದವ್ ಭಾರತ ತಂಡದಿಂದ ಹೊರಗಿದ್ದರೆ ಆಸ್ಟ್ರೇಲಿಯಾ ಹೇಜಲ್‌ವುಡ್, ಮ್ಯಾಕ್ಸ್‌ವೆಲ ಅವರನ್ನು ಫಿಟ್‌ನೆಸ್ ಕಾರಣದಿಂದ ಹೊರಗಿಟ್ಟಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಸೆಪ್ಟೆಂಬರ್ 23 ಭಾನುವಾರದಂದು ಆಯೋಜನೆಯಾಗಲಿದೆ. ಈ ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದ್ದು 1 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೊಸಿಯೇಶನ್ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಗೊಳ್ಳುತ್ತಿದೆ. ಸ್ಪೋರ್ಟ್ಸ್ 18 ವಾಹಿನಿಯಲ್ಲಿ ಈ ಪಂದ್ಯವನ್ನು ನೇರವಾಗಿ ವೀಕ್ಷಿಸುವ ಅವಕಾಶವಿದ್ದು ಜಿಯೋ ಸಿನಿಮಾದಲ್ಲಿಯೂ ಪಂದ್ಯವನ್ನು ಲೈವ್ ಸ್ಟ್ರೀಮಿಂಗ್ ಮೂಲಕ ಆನಂದಿಸಬಹುದಾಗಿದೆ.
ಈ ಮೈದಾನದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ತಂಡಕ್ಕೆ ಮೇಲುಗೈ ದೊರೆಯುವ ಸಾಧ್ಯತೆ ಹೆಚ್ಚಿದೆ. ಕಳೆದ ಆರು ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ತಂಡ ಗೆಲುವು ಸಾಧಿಸಿದೆ. ಇನ್ನು ಈ ಮೈದಾನದ ಸರಾಸರಿ ಸ್ಕೋರ್ 320 ರನ್ ಆಗಿದ್ದರೆ 418 ರನ್ ಇಲ್ಲಿನ ಹೈಯೆಸ್ಟ್ ಸ್ಕೋರ್. 247 ರನ್ ಈ ಮೈದಾನದ ಅತ್ಯಂತ ಕನಿಷ್ಠ ಸ್ಕೋರ್. ಹೀಗಾಗಿ ಇಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿರುವುದರಲ್ಲಿ ಅನುಮಾನವಿಲ್ಲ. ಭಾನುವಾರ ಕೂಡ ರನ್ ಮಳೆಯೇ ಹರಿದುಬರುವ ಸಾಧ್ಯತೆಯಿದೆ.
ಭಾರತ
ಶುಬ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ.
ಆಸ್ಟ್ರೇಲಿಯಾ:
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಕ್ಯಾಮರೂನ್ ಗ್ರೀನ್, ಜೋಶ್ ಇಂಗ್ಲಿಷ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬಾಟ್, ನಾಥನ್ ಎಲ್ಲಿಸ್, ಆಡಮ್ ಝಂಪಾ.