
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಅದ್ಭುತ ಪ್ರದರ್ಶನ ನೀಡಿ ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ಸು ಸಾಧಿಸಿದೆ. ಅಹ್ಮದಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್‌ಗಳು ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ. ಇದರ ಮಧ್ಯೆಯೂ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಭಾರತದ ಪರವಾಗಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದುಈ ಪಂದ್ಯದಲ್ಲಿ ಆರು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ.
ಈ ಅದ್ಭುತ ಬೌಲಿಂಗ್ ಪ್ರದರ್ಶನದೊಂದಿಗೆ ಆರ್ ಅಶ್ವಿನ್ ಭಾರತದ ಪರವಾಗಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ದಿಜ್ಜಗ ಆಟಗಾರ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆಯನ್ನು ಆರ್ ಅಶ್ವಿನ್ ಮುರಿಯುವ ಮೂಲಕ ವಿಶೇಷ ಸಾಧನೆ ಮಾಡಿದಂತಾಗಿದೆ. ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಐದು ವಿಕೆಟ್‌ಗಳ ಗೊಂಚಲು ಪಡೆದ ದಾಖಲೆ ಈವರೆಗೆ ಅನಿಲ್ ಕುಂಬ್ಳೆ ಹೆಸರಿನಲ್ಲಿತ್ತು. ಇದನ್ನು ಆರ್ ಅಶ್ವಿನ್ ಮುರಿದಿದ್ದಾರೆ.
ಟೆಸ್ಟ್‌ನಲ್ಲಿ ಇದು ಆರ್ ಅಶ್ವಿನ್ ಅವರ 32ನೇ ಐದು ವಿಕೆಟ್‌ಗಳ ಗೊಂಚಲಾಗಿದೆ. ಆದರೆ ತವರಿನಲ್ಲಿ ಇದು ಅವರ 26ನೇಯದು. ಈ ಮೂಲಕ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಭಾರತದ ನೆಲದಲ್ಲಿ ಅನಿಲ್ ಕುಂಬ್ಳೆ 25 ಬಾರಿ ಐದಕ್ಕೂ ಹೆಚ್ಚು ವಿಕೆಟ್ ಕಿತ್ತು ಮಿಂಚಿದ್ದರು. ಈ ದಾಖಲೆ ಈಗ ಅಶ್ವಿನ್ ಪಾಲಾಗಿದೆ.
ಇನ್ನು ಒಟ್ಟಾರೆಯಾಗಿ ತವರು ನೆಲದಲ್ಲಿ ಅತಿ ಹೆಚ್ಚು ಐದು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್ ಎರಡನೇ ಸ್ಥಾನವನ್ನು ಶ್ರೀಲಂಕಾದ ರಂಗನಾ ಹೆರಾತ್ ಜೊತೆಗೆ ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಈ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ತವರಿನಲ್ಲಿ ಮುರಳೀಧರನ್ 73 ಟೆಸ್ಟ್ ಪಂದ್ಯಗಳಲ್ಲಿ 45 ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದರು. ಎರಡನೇ ಸ್ಥಾನದಲ್ಲಿರುವ ರಂಗನಾ ಹೆರಾತ್ ಹಾಗೂ ಆರ್ ಅಶ್ವಿನ್ ತಲಾ 26 ಐದು ವಿಕೆಟ್‌ಗಳ ಗೊಂಚಲು ಹೊಂದಿದ್ದಾರೆ.
ಇನ್ನು ಈ ಪಂದ್ಯದಲ್ಲೊ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ಅದ್ಭುತ ಬ್ಯಾಟಿಂಹ್ ಪ್ರದರ್ಶನ ನೀಡಿದೆ. ಉಸ್ಮಾನ್ ಖವಾಜಾ 180 ರನ್‌ಗಳಿದರೆ ಕ್ಯಾಮರೂನ್ ಗ್ರೀನ್ 114 ರನ್‌ಗಳಿಸಿ ಭರ್ಜರಿ ಶತಕಗಳ ಮೂಲಕ ಆಸ್ಟ್ರೇಲಿಯಾದ ಬೃಹತ್ ಮೊತ್ತಕ್ಕೆ ಕಾರಣವಾದರು. ಈ ಇಬ್ಬರ ಶತಕದ ನೆರವಿನಿಂದಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 480 ರನ್‌ಗಳಿಸಿದೆ.
ಇನ್ನು ನಾಲ್ಕು ಪಂದ್ಯಗಳ ಈ ಸರಣಿಯಲ್ಲಿ ಟೀಮ್ ಇಂಡಿಯಾ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ಮುನ್ನಡೆ ಸಾಧಿಸಿತ್ತು. ಆದರೆ ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಈ ಸರಣಿಯ ಅಂತರವನ್ನು 1-2ಕ್ಕೆ ತಗ್ಗಿಸಿಕೊಂಡಿತ್ತು. ಇದೀಗ ಅಂತಿಮ ಪಂದ್ಯದಲ್ಲಿಯೂ ಹಿಡಿತ ಸಾಧಿಸಿರುವ ಆಸ್ಟ್ರೇಲಿಯಾ ಪಂದ್ಯವನ್ನು ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಈ ಮೂಲಕ ಸರಣಿಯನ್ನು ಸಮಬಲಗೊಳಿಸುವ ಪ್ರಯತ್ನದಲ್ಲಿದೆ.
ಇನ್ನು ಈ ಪಂದ್ಯವನ್ನು ಗೆದ್ದರೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಥಾನವನ್ನು ಪಡೆಯಲಿದೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಯಾವ ರೀತಿಯಲ್ಲಿ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.