
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡ ಭಾರತ ಟಿ20 ಪಂದ್ಯವನ್ನು ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ ವಶಕ್ಕೆ ಪಡೆದುಕೊಂಡಿದೆ. ಆದರೆ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿರುವ ಟೆಸ್ಟ್ ಸರಣಿಗೆ ಇನ್ನೋರ್ವ ಪ್ರಮುಖ ಆಟಗಾರ ಅಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದೆ. ಅದು ಬೇರೆಯಾರೂ ಅಲ್ಲ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ.
ರವೀಂದ್ರ ಜಡೇಜಾ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸ್ನಾಯು ಸೆಳೆತ ಹಾಗೂ ಹಾಗೂ ತಲೆಗೆ ಚೆಂಡು ಬಡಿದು ಗಾಯಗೊಂಡಿದ್ದರು. ಹೀಗಾಗಿ ಚುಟುಕು ಸರಣಿಯ ಉಳಿದ ಪಂದ್ಯಗಳಿಂದ ಅವರು ಹೊರಬಿದ್ದಿದ್ದರು. ಈಗ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೂ ಅವರು ಅಲಭ್ಯವಾಗುವ ಸಾಧ್ಯತೆ ಹೆಚ್ಚಿದೆ.
ರವೀಂದ್ರ ಜಡೇಜಾ ಅವರಿಗೆ ಮೂರು ವಾರಗಳ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಾಗುತ್ತಿದೆ. ಇದಕ್ಕೆ ಐಸಿಸಿಯ ನಿಯಮವೂ ಕಾರಣವಾಗಿದೆ. ಹೀಗಾಗಿ ಅವರು ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲೂ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. 32ರ ಹರೆಯದ ರವೀಂದ್ರ ಜಡೇಜಾ 49 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.
ಐಸಿಸಿಯ ಕನ್ಕುಶನ್ ಪ್ರೊಟೋಕಾಲ್ ಪ್ರಕಾರ ಆಟಗಾರ ಗಾಯಗೊಂಡರೆ ಆಟಗಾರನಿಗೆ 7-10 ದಿನಗಳ ವಿಶ್ರಾಂತಿ ಕಡ್ಡಾಯವಾಗಿದೆ. ಹೀಗಾಗಿ ಸಿಡ್ನಿಯಲ್ಲಿ ಡಿಸೆಂಬರ್ 11 ರಿಂದ ಆರಂಭವಾಗುವ ಮೂರು ದಿನಗಳ ಡೇ-ನೈಟ್ ಅಭ್ಯಾಸ ಪಂದ್ಯಕ್ಕೂ ಜಡೇಜಾ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಹೀಗಾಗಿ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳದೆ ಜಡೇಜಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿಲ್ಲ ಎಂದು ಮೂಲಗಳು ಹೇಳಿದೆ.
ಕನ್ಕುಶನ್‌ಗಿಂತಲೂ ಹೆಚ್ಚಾಗಿ ರವೀಂದ್ರ ಜಡೇಜಾ ಅವರು ಮಂಡಿರಜ್ಜು ಗಾಯಕ್ಕೆ ಒಳಗಾಗಿರುವ ಕಾರಣ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಸಂಪೂರ್ಣ ಗುಣಮುಖರಾಗದೆ ಜಡೇಜಾ ಕಣಕ್ಕಿಳಿಯುವ ಸಾಧ್ಯತೆಯಿಲ್ಲ. ಈ ಕಾರಣದಿಂದಾಗಿ ಜಡೇಜಾ ಮೊದಲ ಒಂದು ಅಥವಾ ಎರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗುವ ಸಂಭವ ಹೆಚ್ಚಾಗಿದೆ.