Ravindra Jadeja: ಇದ್ದಕ್ಕಿದ್ದಂತೇ ಅಂಪೈರ್ ಆಗಿ ಬದಲಾದ ರವೀಂದ್ರ ಜಡೇಜಾ!: ತಮಾಷೆಯ ವಿಡಿಯೋ

ಅಹ್ಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಎರಡು ದಿನಗಳ ಆಟದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಕ್ಯಾಮರೂನ್ ಗ್ರೀನ್ ಆಸಿಸ್ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಈ ಇಬ್ಬರು ಆಟಗಾರರ ವಿಕೆಟ್ ಪಡೆಯಲು ವಿಫಲವಾಗಿದ್ದಾಗ ಟೀಮ್ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ತಮಾಷೆಯ ವರ್ತನೆಯಿಂದ ಉಲ್ಲಾಸ ತುಂಬಿದರು.
ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದ ಅಂತ್ಯಕ್ಕೆ 255 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಲ್ಲಿಂದ ತಮ್ಮ ಎರಡನೇ ದಿನದಾಟವನ್ನು ಆರಂಭಿಸಿತು. ಆದರೆ ಆಸಿಸ್ ದಾಂಡಿಗರ ಆಟದ ಮುಂದೆ ಭಾರತದ ಬೌಲರ್‌ಗಳ ಆಟ ನಡೆಯಲಿಲ್ಲ. ಎರಡನೇ ದಿನದದ ಮೊದಲ ಸೆಶನ್‌ನಲ್ಲಿ ಭಾರತ ಒಂದು ವಿಕೆಟ್ ಪಡೆಯಲು ಕೂಡ ಸಾಧ್ಯವಾಗಿರಲಿಲ್ಲ. ಆದರೆ ಎರಡನೇ ಸೆಶನ್‌ನಲ್ಲಿ ಗ್ರೀನ್ ಶತಕ ಸಿಡಿಸಿದ ಬಳಿಕ ಕ್ಯಾಮರೂನ್ ಗ್ರೀನ್ ವಿಕೆಟ್ ಪಡೆಯಲು ಭಾರತ ಯಶಸ್ವಿಯಾಯಿತು.
ಹೀಗೆ ಭಾರತ ವಿಕೆಟ್ ಪಡೆಯಲು ಹರಸಾಹಸ ಪಡುತ್ತಿರುವಾಗ ರವೀಂದ್ರ ಜಡೇಜಾ ತಂಡದಲ್ಲಿ ಉತ್ಸಾಹ ತುಂಬಿಸುವ ಪ್ರಯತ್ನ ನಡೆಸಿದರು. ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ ಔಟ್ ಎಂದು ಅಂಪೈರ್ ಬಳಿ ಮನವಿ ಮಾಡಿದರು. ಆ ಸಂದರ್ಭದಲ್ಲಿ ಹತ್ತಿರದಲ್ಲೇ ಇದ್ದ ರವೀಂದ್ರ ಜಡೇಜಾ ಅಂಪೈರ್ ರೀತಿಯಲ್ಲಿ ಮೂರನೇ ಅಂಪೈರ್‌ಗೆ ಮೇಲ್ಮನವಿ ಸಲ್ಲಿಸುವಂತೆ ಕೈಸನ್ನೆ ಮಾಡಿದರು. ಮಾತ್ರವಲ್ಲ ಮುಂದುವರಿದು ಅವರು ಅಂಪೈರ್ ರೀತಿ ಸಾಫ್ಟ್ ಸಿಗ್ನಲ್ 'ಔಟ್' ಎಂದು ಕೂಡ ತಮಾಷೆಯಾಗಿಯೇ ಸನ್ನೆ ಮಾಡಿದರು. ರವೀಂದ್ರ ಜಡೇಜಾ ಅವರ ಈ ವರ್ತನೆ ಅಭಿಮಾನಿಗಳಲ್ಲಿ ನಗು ಮೂಡಿಸಿದೆ. ಅಲ್ಲದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ಆಸ್ಟ್ರೇಲಿಯಾದ ಪ್ರಮುಖ ದಾಂಡಿಗ ಹಾಗೂ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಸ್ಟೀವ್ ಸ್ಮಿತ್ 135 ಎಸೆತಗಳಲ್ಲಿ 38 ರನ್ ಬಾರಿದ್ದಾಗ ಜಡೇಜಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ವಿಕೆಟ್ ಕಳೆದುಕೊಂಡರು.
ಇನ್ನು ಈ ಪಂದ್ಯದಲ್ಲಿ ಭಾರತದ ಪರವಾಗಿ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದು ಅನುಭವಿ ಆಟಗಾರ ಆರ್ ಅಶ್ವಿನ್. ಬ್ಯಾಟರ್‌ಗಳಿಗೆ ಸಹಕಾರಿಯಾಗುವ ಪಿಚ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ ಆರ್ ಅಶ್ವಿನ್ ಒಟ್ಟು 6 ವಿಕೆಟ್ ಪಡೆದು ಮಿಂಚಿದ್ದಾರೆ. ಇನ್ನು ವೇಗಿ ಶಮಿ ಎರಡು ವಿಕೆಟ್ ಪಡೆದರೆ ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು.
ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 480 ರನ್‌ಗಳಿಗೆ ಆಲೌಟ್ ಆದ ಬಳಿಕ ಬ್ಯಾಟಿಂಗ್ ಆರಂಭಿಸಿರುವ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ 10 ಓವರ್‌ಗಳಲ್ಲಿ 36 ರನ್‌ಗಳಿಸಿದ್ದಾರೆ. ರೋಹಿತ್ ಶರ್ಮಾ 17 ರನ್ ಹಾಗೂ ಶುಬ್ಮನ್ ಗಿಲ್ 18 ರನ್‌ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications