'ಕಿರಿಕಿರಿ ಕೀಪರ್' ಪಂತ್‌ಗೆ ತಗಲಾಕ್ಕೊಂಡ ಟಿಮ್ ಪೈನೆ: ವೈರಲ್ ವಿಡಿಯೋ!

ಮೆಲ್ಬರ್ನ್, ಡಿಸೆಂಬರ್ 29: ವಿಕೆಟ್ ಕೀಪಿಂಗ್ ಮಧ್ಯೆ ಕಾಮೆಂಟರಿಯ ತರ್ಲೆಯಾಟವನ್ನು ಭಾರತದ ಯುವ ಆಟಗಾರ ಪಂತ್ ಮತ್ತೆ ಶುರು ಮಾಡಿದ್ದಾರೆ. ಹಿಂದೆ ಆಸೀಸ್ ಆಟಗಾರ ಪ್ಯಾಟ್ ಕಮಿನ್ಸ್ ಅವರು ಪಂತ್ ತಮಾಷೆಗೆ ಬಲಿಯಾಗಿದ್ದರು. ಈ ಬಾರಿ ನಾಯಕ ಟಿಮ್ ಪೈನೆ ತಗಲಾಕ್ಕೊಂಡಿದ್ದಾರೆ.
ಈ ತಮಾಷೆ ಕಾಣಸಿಕ್ಕಿದ್ದು ಭಾರತ vs ಆಸ್ಟ್ರೇಲಿಯಾ ಮೂರನೇ ಟೆಸ್ಟ್ 4ನೇ ದಿನದಾಟದ ವೇಳೆ. ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ಗೆ ಇಳಿದಿದ್ದಾಗ 40ನೇ ಓವರ್ ವೇಳೆ ಕೀಪಿಂಗ್ ಮಾಡುತ್ತಿದ್ದ ಪಂತ್ ಮತ್ತೆ ಕಾಮೆಂಟರಿ ಶುರು ಮಾಡಿದ್ದರು. ಇದು ಕಾಲೆಳೆದ ಪೈನೆಗೆ ಪಂತ್ ತಿರುಗೇಟೂ ಹೌದು.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದಿದ್ದ ಭಾರತ 443+106 ರನ್ ಗಳಿಸಿತ್ತು. ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 151 ರನ್ ಪೇರಿಸಿದ್ದರಿಂದ ಗೆಲುವಿಗೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ 399 ರನ್‌ಗಳ ಅವಶ್ಯಕತೆಯಿತ್ತು. ಸಹಜವಾಗೇ ಆಸೀಸ್ ಕೊಂಚ ಒತ್ತಡಕ್ಕೀಡಾಗಿತ್ತು. ಈ ಮಧ್ಯೆ ಪೈನೆ ಬ್ಯಾಟಿಂಗ್ ವೇಳೆ ಪಂತ್ ಮಂಗಾಟ ಬೇರೆ ಶುರು ಮಾಡಿದ್ದರು.
ತಾತ್ಕಾಲಿಕ ನಾಯಕ
7ನೇ ಕ್ರಮಾಂಕದಲ್ಲಿ ಬ್ಯಾಟ್ ಕೈಗೆತ್ತಿಕೊಂಡಿದ್ದ ಪೈನೆ ಕ್ರೀಸ್‌ನಲ್ಲಿದ್ದರು. ಆ ಹೊತ್ತು ಪಂತ್, 'ಮಯಾಂಕ್, ನೀವು ಯಾವತ್ತಾದ್ರೂ ತಾತ್ಕಾಲಿಕ ನಾಯಕನ ಬಗ್ಗೆ ಕೇಳಿದ್ದೀರಾ? ಪೈನೆ ಬರೀ ಮಾತು, ಮಾತನ್ನಷ್ಟೇ ಆಡಬಲ್ಲರು' ಎಂದರು. ಪಾಪ ಅತ್ತ ಪೈನೆ, 'ಶುರುವಾಯ್ತು ಇವ್ನ ಗೋಳು' ಅಂತ ಮನಸ್ಸಿನಲ್ಲೇ ಅಂದುಕೊಂಡ್ರೋ ಏನೋ. ಸುಮ್ಮನೆ ಬ್ಯಾಟಿಂಗ್ ಮಾಡುತ್ತಿದ್ರು.
ವಿಡಿಯೋ ವೈರಲ್
ಅಷ್ಟಕ್ಕೇ ನಿಲ್ಲಿಸದ ಪಂತ್ ಮತ್ತೆ, 'ನೀವು ಯಾವತ್ತಾದ್ರೂ ಟೆಂಪರರಿ ಕ್ಯಾಪ್ಟನ್ ಪದ ಕೇಳಿದ್ದೀರಾ ಮಯಾಂಕ್? ನಮ್ಮ ಮುಂದೆ ಇವತ್ತು ಹೊಸ ಅತಿಥಿಯೊಬ್ಬರಿದ್ದಾರೆ. ಅವರನ್ನು ಔಟ್ ಮಾಡಲು ನಾವೇನೂ ಮಾಡಬೇಕಾಗಿಲ್ಲ' ಎಂದೆಲ್ಲ ಕಾಲೆಳೆದರು. ಆಟದ ವೇಳೆ ಸೆರೆಯಾಗಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
'Now that Big MS back in the ODI squad, maybe he could play for the Hobart Hurricanes. Beautiful city, rent a nice waterfront place.'
😂pic.twitter.com/ql2sRh7E3G — The Field (@thefield_in) December 28, 2018 '>
ಪಂತ್‌ಗೆ ಕ್ಯಾಚಿತ್ತ ಪೈನೆ!
ಪಂತ್ ಕಾಮೆಂಟರಿ ಕಿರಿಕಿರಿ ಸಹಿಸಿಕೊಂಡೇ ಬ್ಯಾಟಿಂಗ್ ಮಾಡಿದ ಪೈನೆ 61.3ನೇ ಓವರ್‌ನಲ್ಲಿ ಜಡೇಜಾ ಎಸೆತದಲ್ಲಿ ಪಂತ್ ಕೈಗೇ ಕ್ಯಾಚಿತ್ತು ಹೊರ ನಡೆದರು. ವಿಕೆಟ್ ಒಪ್ಪಿಸುವಾಗ ಟಿಮ್ 26 ರನ್ ಗಳಿಸಿದ್ದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸೀಸ್ 85 ಓವರ್‌ನಲ್ಲಿ 8 ವಿಕೆಟ್ ಕಳೆದು 258 ರನ್ ಕಲೆ ಹಾಕಿತ್ತು. ಆಸೀಸ್ ಗೆಲ್ಲಲು ಇನ್ನೂ 141 ರನ್ ಗಳ ಅಗತ್ಯವಿತ್ತು. ಗಮ್ಮತ್ತಿನ ಸಂಗತಿಯಂದ್ರೆ ಡಿಸೆಂಬರ್ 27ರಂದು ಪೈನೆ ಕೂಡ ಪಂತ್‌ಗೆ ಹೀಗೇ ಕಾಲೆಳೆದಿದ್ರು.
ಕಿರಿಕಿರಿ ಕೀಪರ್ ಪಂತ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದ (ಡಿಸೆಂಬರ್ 10) ವೇಳೆ ಕಾಮೆಂಟರಿ ಕಿರಿಕಿರಿ ಶುರು ಮಾಡಿದ್ದು ಪಂತೆ. ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ ವೇಳೆ ಭಾರೀ ಜೋಶ್‌ನಲ್ಲಿದ್ದ ರಿಷಬ್ ಪಂತ್, ಕಮಿನ್ಸ್ ಅವರನ್ನು ಗಲಿಬಿಲಿಗೊಳಿಸಿದ್ದರು. ಅಂದ್ಹಾಗೆ ಆಸೀಸ್ ಕ್ರಿಕೆಟ್ ಇತಿಹಾಸದಲ್ಲೇ ಈಪರಿಯ 'ಕೀಪರ್ ಕಿರಿಕಿರಿ' ಹೊಸದಿರಬೇಕು ನೋಡಿ!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications