Ind vs Aus: ಇದೆಂಥಾ ಕಾಂಬಿನೇಶನ್?: 2ನೇ ಪಂದ್ಯದಲ್ಲಿ ಈ ಮೂರು ಬದಲಾವಣೆ ಭಾರತಕ್ಕೆ ಅಗತ್ಯ!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟ20 ಸರಣಿಯ ಮೊದಲ ಪಂದ್ಯ ಮುಕ್ತಾಯವಾಗಿದ್ದು ಭಾರತ ತಂಡ ಮುಖಭಂಗ ಅನುಭವಿಸಿದೆ. ಭರ್ಜರಿ ಬ್ಯಾಟಿಂಗ್‌ನ ಹೊರತಾಗಿಯೂ ಭಾರತ ಬೌಲಿಂಗ್‌ನಲ್ಲಿ ಮತ್ತೊಮ್ಮೆ ಹಿನ್ನಡೆ ಅನುಭವಿಸಿದ್ದು ಸೋಲು ಅನುಭವಿಸುವಂತಾಗಿದೆ. ಪ್ರಮುಖ ಬೌಲರ್ ಜಸ್ಪ್ರೀತ್ ಬೂಮ್ರಾ ಆಡುವ ಬಳಗದಿಂದ ಹೊರಗುಳಿದಿದ್ದು ತಂಡಕ್ಕೆ ಮತ್ತೊಮ್ಮೆ ದುಬಾರಿಯಾಯಿತು.
ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಭರ್ಜರಿ ಪ್ರದರ್ಶನ ನೀಡಿತ್ತು. ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಭಾರತ 206 ರನ್‌ಗಳನ್ನು ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಆಸಿಸ್ ಪಡೆ ಕೂಡ 6 ವಿಕೆಟ್‌ಗಳನ್ನು ಗಳೆದುಕೊಂಡು ಇನ್ನೂ 4 ಎಸೆತಗಳು ಬಾಕಿಯಿರುವಂತೆಯೇ ಗೆಲುವು ಸಾಧಿಸಿದೆ. ಭಾರತದ ಪರವಾಗಿ ಅನುಭವಿ ಭುವನೇಶ್ವರ್ ಕುಮಾರ್ 52 ರನ್ ನೀಡಿ ದುಬಾರಿಯೆನಿಸಿದರೆ ಹರ್ಷಲ್ ಪಟೇಲ್ ಕೂಡ 49 ರನ್ ಬಿಟ್ಟುಕೊಟ್ಟರು.
ಒಟ್ಟು ಮೂರು ಪಂದ್ಯಗಳ ಈ ಸರಣಿಯ ಎರಡನೇ ಪಂದ್ಯ ಸೆಪ್ಟೆಂಬರ್ 23ರಂದು ನಡೆಯಲಿದ್ದು ಈ ಪಂದ್ಯದಲ್ಲಿ ಭಾರತ ತಂಡ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ವಿಶ್ವಕಪ್ ದೃಷ್ಟಿಯಿಂದ ಬೌಲಿಂಗ್ ವಿಭಾಗದಲ್ಲಿ ಈ ಮೂರು ಬದಲಾವಣೆಗಳು ಅನಿವಾರ್ಯವಾಗಿದೆ.

ಚಾಹಲ್ ಬದಲಿಗೆ ಆರ್ ಅಶ್ವಿನ್
ಟೀಮ್ ಇಂಡಿಯಾದ ವಿಕೆಟ್ ಟೇಕಿಂಗ್ ಬೌಲರ್ ಎನಿಸಿಕೊಂಡಿರುವ ಯುಜುವೇಂದ್ರ ಚಾಹಲ್ ಇತ್ತೀಚಿನ ದಿನಗಳಲ್ಲಿ ವಿಕೆಟ್ ಟೇಕರ್ ಎನಿಸಿಕೊಂಡಿಲ್ಲ. ಆಸಿಸ್ ವಿರುದ್ಧದ ಮೊದಲ ಪಂದ್ಯದಲ್ಲಿಯೂ ಯುಜಿ ಕೇವಲ ಒಂದು ವಿಕೆಟ್ ಮಾತ್ರವೇ ಪಡೆದುಕೊಂಡಿದ್ದು ಅದು ಪಂದ್ಯ ಬಹುತೇಕ ತಂಡದಿಂದ ಕೈಜಾರಿತ್ತು. ಆದರೆ 3.2 ಓವರ್‌ಗಳಲ್ಲಿ ಚಾಹಲ್ ಬಿಟ್ಟುಕೊಟ್ಟ ರನ್ 42. ಈ ಮೂಲಕ ಇತ್ತೀಚಿನ ದಿನಗಳಲ್ಲಿ ಚಾಹಲ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ಆರ್ ಅಶ್ವಿನ್ ಇತ್ತೀಚೆಗೆ ಚುಟುಕು ಮಾದರಿಯಲ್ಲಿ ಅತ್ಯಂತ ಎಕಾನಮಿ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೂಲಕ ಎದುರಾಳಿ ತಂಡದ ಮೇಲೆ ಇತ್ತಡ ಸೃಷ್ಟಿಸಲು ಸಾಧ್ಯವಾಗಲಿದೆ. ಅಲ್ಲದೆ ಸಾಕಷ್ಟು ವಿಭಿನ್ನ ಅಸ್ತ್ರಗಳು ಅಶ್ವಿನ್ ಬತ್ತಳಿಕೆಯಲ್ಲಿದ್ದು ಇದು ಪಂದ್ಯದ ವಿವಿಧ ಹಂತಗಳಲ್ಲಿ ಬಳಕೆಗೆ ಬರಲಿದೆ.

ಭುವನೇಶ್ವರ್ ಕುಮಾರ್ ಬದಲಿಗೆ ದೀಪಕ್ ಚಾಹರ್
ಡೆತ್ ಓವರ್‌ನಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ದಾಳಿ ನಡೆಸಲು ಭುವನೇಶ್ವರ್ ಕುಮಾರ್ ಮತ್ತೊಮ್ಮೆ ವಿಫಲವಾಗಿದ್ದಾರೆ. 19ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ 16 ರನ್ ಬಿಟ್ಟುಕೊಟ್ಟಿದ್ದು ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಒಟ್ಟು 52 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅನುಭವಿ ಆಟಗಾರನಾಗಿ ಭಾರತ ತಂಡ ಭುವಿಯಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದೆ. ಆದರೆ ಸದ್ಯಕ್ಕೆ ಭುವಿ ಭಾರತದ ಪಾಲಿಗೆ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಹೀಗಾಗಿ ಎರಡನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟು ದೀಪಕ ಚಾಹರ್‌ಗೆ ಅವಕಾಶ ನೀಡಬೇಕಿದೆ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಚಾಹಲ್ ಮೀಸಲು ಆಟಗಾರನಾಗಿದ್ದರೂ ಈ ಬದಲಾವಣೆಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಚಾಹರ್ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಕೊಡುಗೆ ನೀಡಬಲ್ಲ ಆಟಗಾರನಾಗಿದ್ದಾರೆ.

ಉಮೇಶ್ ಯಾದವ್ ಬದಲಿಗೆ ಜಸ್ಪ್ರೀತ್ ಬೂಮ್ರಾ
ಭಾರತದ ಹಿರಿಯ ಆಟಗಾರ ಉಮೇಶ್ ಯಾದವ್ ಸುದೀರ್ಘ ಕಾಲದ ಬಳಿಕ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಮೊಹಮ್ಮದ್ ಶಮಿ ಕೊರೊನಾವೈರಸ್‌ನ ಕಾರಣದಿಂದಾಗಿ ಆಸಿಸ್ ಪ್ರವಾಸದಿಂದ ಹೊರಗುಳಿಯಬೇಕಾದ ಅನಿವಾರ್ಯತೆಗೆ ಒಳಗಾದ ಕಾರಣ ಉಮೇಶ್ ಯಾದವ್ ಅವರನ್ನು ಬದಲಿ ಆಟಗಾರನಾಗಿ ತಂಡದಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಸುದೀರ್ಘ ಕಾಲದ ಬಳಿಕ ಉಮೇರ್ಶ ಯಾವ್ ಭಾರತದ ವೈಟ್‌ಬಾಲ್ ತಂಡದಲ್ಲಿ ಅವಕಾಶ ಪಡೆದುಕೊಮಡಿದ್ದರೂ ಮೊದಲ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. 2 ವಿಕೆಟ್ ಪಡೆಯಲು ಸಫಲವಾಗಿದ್ದರೂ ಉಮೇಶ್ ಯಾದವ್ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಆದರೆ ಈ ಸ್ಥಾನದಲ್ಲಿ ಜಸ್ಪ್ರೀತ್ ಬೂಮ್ರಾ ಕಣಕ್ಕಿಳಿಯಬೇಕು ಎಂಬುದು ಸಹಜವಾದ ನಿರೀಕ್ಷೆಯಾಗಿದೆ. ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವುದಕ್ಕೂ ಮುನ್ನ ಬೂಮ್ರಾ ತಮ್ಮ ಲಯವನ್ನು ಕಂಡುಕೊಳ್ಳಲು ಅವಕಾಶ ದೊರೆತಂತಾಗುತ್ತದೆ.

ಅಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತದ ಸ್ಕ್ವಾಡ್ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಯುಜ್ವೇಂದ್ರ ಚಾಹಲ್, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ದೀಪಕ್ ಚಾಹರ್ , ದೀಪಕ್ ಹೂಡಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications