ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಬುಧವಾರ ಆಯೋಜನೆಯಾಗಲಿದೆ. ಟೀಮ್ ಇಂಡಿಯಾ ಈ ಸರಣಿಯನ್ನು ಈಗಾಗಲೇ ತನ್ನ ವಶಕ್ಕೆ ಪಡೆದುಕೊಂಡಿದೆ. ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ತಂಡಕ್ಕೆ ಅಂತಿಮ ಪಂದ್ಯದಲ್ಲಿ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಸ್ಟಾರ್ ಆಟಗಾರರು ಕಮ್‌ಬ್ಯಾಕ್ ಮಾಡಲಿದ್ದಾರೆ. ಆದರೆ ಕೊನೆಯ ಪಂದ್ಯಕ್ಕೆ ಆಯ್ಕೆಯಾಗಿದ್ದ ಮೂವರು ಆಟಗಾರರನ್ನು ವಿಶ್ರಾಂತಿಯ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅಬ್ಬರದ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿತು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಭಾರತ 400 ರನ್‌ಗಳ ಬೃಹತ್ ಗುರಿಯನ್ನು ಆಸ್ಟ್ರೇಲಿಯಾ ತಂಡಕ್ಕೆ ನಿಡಿತ್ತು. ನಂತರ ಮಳೆಯಿಂದಾಗಿ ಓವರ್‌ಗಳ ಕಡಿತವಾದ ಕಾರಣ ಡಿಎಲ್ ಆಧಾರದಲ್ಲಿ 33 ಓವರ್‌ಗಳಲ್ಲಿ 317 ರನ್‌ಗಳನ್ನು ಗಳಿಸುವ ಗುರಿಯನ್ನ ಪಡೆದುಕೊಂಡಿತ್ತು. ಆದರೆ 28.2 ಓವರ್‌ಗಳಿಗೆ ಆಲೌಟ್ ಆದ ಆಸ್ಟ್ರೇಲಿಯಾ 99 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು.

ಈ ಪಂದ್ಯದಲ್ಲಿ ಭಾರತದ ಪರವಾಗಿ ಆಡಿದ್ದ ಇಬ್ಬರು ಆಟಗಾರರು ಸೇರಿದಂತ ಮೂವರು ಕ್ರಿಕೆಟಿಗರು ಕೊನೆಯ ಪಂದ್ಯದಿಂದ ಹೊರಬಿದ್ದಿದ್ದಾರೆ. ಸರಣಿಯಲ್ಲಿ ಭರ್ಜರಿಯಾಗಿ ರನ್‌ಗಳಿಸಿ ಶತಕವನ್ನೂ ಬಾರಿಸಿರುವ ಶುಬ್ಮನ್ ಗಿಲ್, ಆಲ್‌ರೌಂಡರ್ ಶಾರ್ದೂಲ್ ಠಾಕೂರ್‌ಗೆ ಕೊನೆಯ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಇನ್ನು ಗಾಯಕ್ಕೆ ತುತ್ತಾಗಿರುವ ಅಕ್ಷರ್ ಪಟೇಲ್ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಅಂತಿಮ ಪಂದ್ಯಕ್ಕೂ ಅವರು ಅಲಭ್ಯವಾಗಿದ್ದಾರೆ.
ಸರಣಿಯ ಮೊದಲ ಎರಡು ಪಂದ್ಯಕ್ಕೆ ನಾಲ್ವರು ಸ್ಟಾರ್ ಆಟಗಾರರಿಗೆ ವಿಶ್ರಾಂತಿಯನ್ನು ನೀಡಲಾಗಿತ್ತು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕುಲ್‌ದೀಪ್ ಯಾದವ್ ಹಾಗೂ ಆಲ್‌ರೌಂಡ್ ಹಾರ್ದಿಕ್ ಪಾಂಡ್ಯ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಈ ನಾಲ್ವರು ಕೂಡ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಕೆಲಸದ ಒತ್ತಡವನ್ನು ಕಡಿಮೆಗೊಳಿಸುವದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ರೋಹಿತ್ ಶರ್ಮಾ ಬದಲಿಗೆ ಕೆಎಲ್ ರಾಹುಲ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.
ವಿಶ್ವಕಪ್‌ಗೆ ಮುನ್ನ ನಡೆಯುವ ಕೊನೆಯ ದ್ವಿಪಕ್ಷೀಯ ಸರಣಿ ಇದಾಗಿದ್ದು ಹೀಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳಿಗೂ ಮೆಗಾ ಟೂರ್ನಿಯ ಸಿದ್ಧತೆಗೆ ಇದು ಅತ್ಯಂತ ಮಹತ್ವದ ಸರಣಿಯಾಗಿ ಗುರುತಿಸಿಕೊಂಡಿತ್ತು. ಈ ಸರಣಿಯಲ್ಲಿ ಭಾರತ ತಂಡ ಮೊದಲ ಎರಡು ಪಂದ್ಯಗಳಲ್ಲಿಯೂ ಅದ್ಭುತವಾಗಿ ಪ್ರದರ್ಶನ ನೀಡಿದೆ. ಇದೀಗ ಕೊನೆಯ ಪಂದ್ಯದ ಮಾತ್ರವೇ ಉಳಿದುಕೊಂಡಿದ್ದು ಆ ಪಂದ್ಯದಲ್ಲಿಯೂ ಗೆಲ್ಲುವ ವಿಶ್ವಾಸದಲ್ಲಿದೆ ಭಾರತ ತಂಡ. ಅಲ್ಲದೆ ತಂಡದ ಪ್ರಮುಖ ಆಟಗಾರರು ಈ ಪಂದ್ಯಕ್ಕೆ ಮರಳಲಿದ್ದು ಇದು ಆಸಿಸ್‌ಗೆ ಮತ್ತಷ್ಟು ಸವಾಲೊಡ್ಡಲಿದೆ. ಹೀಗಾಗಿ ವಿಶ್ವಕಪ್‌ಗೂ ಮುನ್ನ ಭರ್ಜರಿ ಸಿದ್ಧತೆಯೊಂದಿಗೆ ಭಾರತ ಕಣಕ್ಕಿಳಿಯಲಿದೆ.
ಇನ್ನು ಟೀಮ್ ಇಂಡಿಯಾ ಪ್ರಸ್ತುತ ಏಕದಿನ ಮಾದರಿಯಲ್ಲಿಯೂ ನಂಬರ್ 1 ಸ್ಥಾನಕ್ಕೇರಿದ್ದು ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ವಶಕ್ಕೆ ಪಡೆಯುವ ಮೂಲಕ ವಿಶ್ವಕಪ್ ಟೂರ್ನಿಗೆ ನಂಬರ್ 1 ತಂಡವಾಗಿಯೇ ಕಣಕ್ಕಿಳಿಯಲಿದೆ. ಇದರ ಜೊತೆಗೆ ಎಲ್ಲಾ ಮಾದರಿಯಲ್ಲಿಯೂ ಭಾರತ ನಂಬರ್1 ತಂಡ ಎನಿಸಿಕೊಂಡಿದ್ದು ಇದೆಲ್ಲವೂ ಭಾರತ ತಂಡದ ಆತ್ಮವಿಶ್ವಾಸವನ್ನು ಸಹಜವಾಗಿಯೇ ಹೆಚ್ಚಿಸಲಿದೆ. ಹೀಗಾಗಿ ಕುತೂಹಲ ಮೂಡಿಸಿದೆ.