
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ದಿನ ಉತ್ತಮ ಪ್ರದರ್ಶನ ನೀಡಿದೆ. ಅದರಲ್ಲೂ ಆಸ್ಟ್ರೇಲಿಯಾ ತಂಡದ ಆರಂಬಿಕ ಆಟಗಾರ ಉಸ್ಮಾನ್ ಖವಾಜ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು ಭಾರತದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಗಮನಸೆಳೆದರು. ಮೊದಲ ದಿನ ಆಸ್ಟ್ರೇಲಿಯಾದ ಯಶಸ್ಸಿನಲ್ಲಿ ಖವಾಜ ಪಾತ್ರವೇ ನಿರ್ಣಾಕ ಎಂಬುದರಲ್ಲಿ ಅನುಮಾನವಿಲ್ಲ.
ಮೊದಲ ದಿನದಲ್ಲಿ ಆಸ್ಟ್ರೇಲಿಯಾ ಗಳಿಸಿದ 255 ರನ್‌ಗಳ ಪೈಕಿ ಖವಾಜ ಅವರ ಬ್ಯಾಟ್‌ನಿಂದ 104 ರನ್ ಬಂದಿದೆ. ಈ ಶತಕ ಸಿಡಿಸಿದ ಬಳಿಕ ಮಾತನಾಡಿದ ಉಸ್ಮಾನ್ ಖವಾಜ ಈ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಶತಕ ತನ್ನ ಪಾಲಿಗೆ ಯಾಕಲೆ ವಿಶೇಷ ಎಂಬುದನ್ನು ಕೂಡ ಖವಾಸ ವಿವರಿಸಿದ್ದಾರೆ.
"ಶತಕ ಸಿಡಿಸಿದ ಬಳಿಕ ಇಷ್ಟು ದೊಡ್ಡದಾಗಿ ನಾನು ಯಾವಾಗಾದರೂ ನಗು ಬೀರಿರುವುದು ನನಗೆ ನೆನಪಿಲ್ಲ. ಅದಕ್ಕೆ ಭಾವುಕ ಕಾರಣವೂ ಇದೆ. ಇದಕ್ಕೂ ಮುನ್ನ ನಾನು 2 ಬಾರಿ ಭಾರತಕ್ಕೆ ಟೆಸ್ಟ್ ಸರಣಿಗಾಗಿ ಪ್ರವಾಸ ಕೈಗೊಂಡಿದ್ದೆ(2023, 2017). ಆದರೆ ನನಗೆ ಭಾರತದಲ್ಲಿ ಆಡಲು ಅವಕಾಶ ದೊರೆಯುವುದಕ್ಕೆ ಮುನ್ನ ನಾನು 8 ಪಂದ್ಯಗಳಲ್ಲಿ ನೀರು ಸರಬರಾಜು ಮಾಡಿದ್ದೆ" ಎಂದು ಈ ಹಿಂದಿನ ಎರಡು ಪ್ರವಾಸಗಳಲ್ಲಿಯೂ ಭಾರತದಲ್ಲಿ ಆಡಲು ಅವಕಾಶ ದೊರೆಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಇನ್ನು ಭಾರತದಲ್ಲಿ ತನಗೆ ಯಾವ ಕಾರಣಕ್ಕೆ ಆಡುವ ಅವಕಾಶ ದೊರೆಯಲಿಲ್ಲ ಎಂಬುದನ್ನು ಕೂಡ ಖವಾಜ ವಿವರಿಸಿದ್ದಾರೆ. "ನನ್ನ ವೃತ್ತಿ ಜೀವನದ ಮಧ್ಯ ಭಾಗದುದ್ದಕ್ಕೂ ನನಗೆ ಸ್ಪಿನ್‌ಗೆ ಆಡಲು ಬರುವುದಿಲ್ಲ ಎಂದು ಹೇಳತೊಡಗಿದ್ದರು. ಹಾಗಾಗಿಯೇ ನನಗೆ ಭಾರತದಲ್ಲಿ ಆಡುವ ಅವಕಾಶ ದೊರೆತಿರಲಿಲ್ಲ. ಈಗ ಮೈದಾನಕ್ಕಿಳಿದು ಭಾರತದ ನೆಲದಲ್ಲಿ ನೂರು ರನ್‌ಗಳಿಸಿರುವುದು ಸಂತೋಷವುಂಟು ಮಾಡಿದೆ. ಐದು ವರ್ಷಗಳ ಹಿಂದೆ ನನ್ನನ್ನು ಇದರ ಬಗ್ಗೆ ಕೇಳಿದ್ದರೆ ನೀವು ಹುಚ್ಚರು ಎನ್ನುತ್ತಿದ್ದೆ" ಎಂದಿದ್ದಾರೆ ಉಸ್ಮಾನ್ ಖವಾಜ.
ಮುಂದುವರಿದು ಮಾತನಾಡಿದ ಉಸ್ಮಾನ್ ಖವಾಜ, "ಸಾಕಷ್ಟು ಭಾವನಾತ್ಮಕ ಅಂಶಗಳಿವೆ, ಇದು ಸಾಧ್ಯವಾಗಲಿದೆ ಎಂದು ನಾನು ಭಾವಿಸಿರಲಿಲ್ಲ" ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಉಸ್ಮಾನ್ ಖವಾಜ ಬಾರಿಸಿದ 15ನೇ ಶತಕವಾಗಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದೆ. ಟ್ರೆವಿಸ್ ಹೆಡ್ ಹಾಗೂ ನಾಯಕ ಸ್ಟೀವ್ ಸ್ಮಿತ್ ಜೊತೆಗೆ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿದ್ದ ಖವಾಜ ಬಳಿಕ ಕ್ಯಾಮರೂನ್ ಗ್ರೀನ್ ಜೊತೆಗೆ ದೊಡ್ಡ ಜೊತೆಯಾಟದತ್ತ ಹೆಜ್ಜೆಯಿಟ್ಟಿದ್ದಾರೆ. ಮೊದಲ ದಿನದಾಟದ ಅಂತ್ಯದಲಿ ಖವಾಜ 251 ಎಸೆತಗಳಲ್ಲಿ 104 ರನ್‌ಗಳಿಸಿದರೆ ಕ್ಯಾಮರೂನ್ ಗ್ರೀನ್ 49 ರನ್‌ಗಳಿಸಿ ಅಜೇಯವಾಗುಳಿದಿದ್ದಾರೆ.
ಟೀಮ್ ಇಂಡಿಯಾ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ
ಬೆಂಚ್: ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಇಶಾನ್ ಕಿಶನ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್
ಆಸ್ಟ್ರೇಲಿಯಾ ಆಡುವ ಬಳಗ: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ಕನ್ನೇಮನ್, ಟಾಡ್ ಮರ್ಫಿ, ನಾಥನ್ ಲಿಯಾನ್
ಬೆಂಚ್: ಸ್ಕಾಟ್ ಬೋಲ್ಯಾಂಡ್, ಮ್ಯಾಟ್ ರೆನ್ಶಾ, ಮಿಚೆಲ್ ಸ್ವೆಪ್ಸನ್, ಲ್ಯಾನ್ಸ್ ಮೋರಿಸ್