

ಮೆಲ್ಬರ್ನ್, ಡಿಸೆಂಬರ್ 25: ಮೆಲ್ಬರ್ನ್‌ನಲ್ಲಿ ನಡೆಯುವ ಭಾರತ vs ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಸಂಬಂಧಿಸಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಬ್ಯಾಟ್ಸ್ಮನ್‌ಗಳಿಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ತಂಡದ ಬ್ಯಾಟ್ಸ್ಮನ್‌ಗಳು ಮುಂದೆ ಬರಲೇಬೇಕು ಎಂದು ಕೊಹ್ಲಿ ಹೇಳಿದ್ದಾರೆ (ಚಿತ್ರ ಕೃಪೆ: ಬಿಸಿಸಿಐ).
ಬುಧವಾರ (ಡಿಸೆಂಬರ್ 26) ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನಾದಿನ (ಡಿ.24) ಕೊಹ್ಲಿ ಮಾತನಾಡಿ, 'ತಂಡದ ಬೌಲರ್‌ಗಳ ಹೋರಾಟಕ್ಕೆ ಬ್ಯಾಟ್ಸ್ಮನ್‌ಗಳು ಬೆಂಬಲ ನೀಡಲೇಬೇಕು. ಬೌಲಿಂಗ್ ಜೊತೆ ಉತ್ತಮ ಬ್ಯಾಟಿಂಗ್ ಕೂಡ ತಂಡ ಪ್ರದರ್ಶಿಸುವಂತಾಗಬೇಕು' ಎಂದು ಕೊಹ್ಲಿ ಹೇಳಿದರು.
'ವೈಯಕ್ತಿಕವಾಗಿ ನಾನು ಒಬ್ಬರು-ಇಬ್ಬರ ಬಗ್ಗೆ ಮಾತನಾಡೋದಿಲ್ಲ. ತಂಡದ ಎಲ್ಲಾ ಬ್ಯಾಟ್ಸ್ಮನ್‌ಗಳು ಒಟ್ಟಾಗಿ ಮುಂದು ಬರಲೇಬೇಕು. ಹಾಗಾದರೆ ಮಾತ್ರ ನಾವು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯ' ಎಂದು ಕೊಹ್ಲಿ ಬ್ಯಾಟ್ಸ್ಮನ್‌ಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಅಡಿಲೇಡ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ ಭಾರತ 31 ರನ್ ಗೆಲುವನ್ನಾಚರಿಸಿದರೆ, ಪರ್ತ್ ಟೆಸ್ಟ್‌ನಲ್ಲಿ 146 ರನ್ ಗಳಿಂದ ಸೋತಿತ್ತು. ಸರಣಿಯೀಗ 1-1ರಿಂದ ಸಮಬಲಗೊಂಡಿದೆ. ಆಸೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಲು ಭಾರತಕ್ಕೆ ಈಗ ಅಪೂರ್ವ ಅವಕಾಶವಿದ್ದು, ಪಂದ್ಯ ಸೋತರೆ ಸರಣಿ ಕೈ ತಪ್ಪಲಿದೆ.