ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ವಿಶೇಷ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಜೊತೆಗೆ ಸೇರಿಕೊಂಡು ಗೆಲುವಿಗೆ ಕಾರಣವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಸೆಹ್ವಾಗ್ ದೊಡ್ಡ ವೇದಿಕೆಗಳನ್ನು ಕೊಹ್ಲಿ ಯಾವತ್ತೂ ಉತ್ತಮ ಪ್ರದರ್ಶನ ನೀಡುವಂಥಾ ಆಟಗಾರ ಎಂದಿದ್ದಾರೆ.
ಕ್ರಿಕ್‌ಬಜ್‌ನೊಂದಿಗೆ ಮಾತನಾಡಿದ ಸೆಹ್ವಾಗ್, ಕೊಹ್ಲಿ ಮತ್ತು ಕೆಎಲ್ ರಾಹುಲ್ ಆಟವನ್ನು ಕೊಂಡಾಡಿದ್ದಾರೆ. ಇಬ್ಬರೂ ಅದ್ಭುತವಾಗಿ ಆಟವನ್ನಾಡಿದ್ದು ಅವರು ಉತ್ತಮ ಜೊತೆಯಾಟವನ್ನು ನೀಡಿದ್ದಾರೆ ಎಂದಿದ್ದಾರೆ. ಕೊಹ್ಲಿ ಮತ್ತು ರಾಹುಲ್ ನಾಲ್ಕನೇ ವಿಕೆಟ್‌ಗೆ 165 ರನ್‌ಗಳ ಜೊತೆಯಾಟವನ್ನು ನೀಡಿದರು. ಇದು ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಅತಿದೊಡ್ಡ ಜೊತೆಯಾಟ ಎನಿಸಿಕೊಂಡಿದೆ.

"ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಇಬ್ಬರೂ ಅದ್ಭುತವಾಗಿ ಆಡಿದ್ದಾರೆ. ಅವರ ಜೊತೆಯಾಟ ಕೂಡ ಅದ್ಭುತವಾಗಿತ್ತು. ಇಬ್ಬರೂ ಪಾಕಿಸ್ತಾನದ ವಿರುದ್ಧವೂ ಶತಕಗಳನ್ನು ಗಳಿಸಿ ಉತ್ತಮ ಜೊತೆಯಾಟವನ್ನು ನೀಡಿದ್ದರು. ಆದರೆ ಈ ಬಾರಿ ಅದು ತೀವ್ರ ಒತ್ತಡಕ್ಕೆ ಸಿಲುಕಿದ ಸಂದರ್ಭದಲ್ಲಿ ಬಂದಿರುವ ಜೊತೆಯಾಟವಾಗಿದೆ" ಎಂದು ಸೆಹ್ವಾಗ್ ಹೇಳಿದ್ದಾರೆ.
"ವಿರಾಟ್ ಕೊಹ್ಲಿ ಬಗ್ಗೆ ನಾನೇನು ಹೇಳಲಿ? ದೊಡ್ಡ ವೇದಿಕೆಗಳಲ್ಲಿ ಅವರು ಯಾವಾಗಲೂ ಅದಭುತವಾಗಿ ಆಡುತ್ತಾರೆ. ವಿಶ್ವಕಪ್‌ನಂಥಾ ಟೂರ್ನಿಯಲ್ಲಿ ಅವರ ರನ್ ದಾಹ ಮತ್ತಷ್ಟು ಹೆಚ್ಚಾಗಿರುತ್ತದೆ. ಅವರು 85 ರನ್‌ಗೆ ವಿಕೆಟ್ ಕಳೆದುಕೊಂಡಿದ್ದು ನನಗೆ ಅಚ್ಚರಿಯಾಯಿತು. ಅವರು ಕೊನೆಯವರೆಗೂ ಉಳಿದುಕೊಳ್ಳಲು ಬಯಸಿದ್ದರು. ಔಟಾದ ರೀತಿಗೆ ಅವರಿಗೂ ಬೇಸರವಾಗಿದೆ" ಎಂದಿದ್ದಾರೆ ಸೆಹ್ವಾಗ್.
ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ 2008ರ ಸಂದರ್ಭದಲ್ಲಿ ತನಗೆ ನಿಧಾನವಾಗಿ ಆಡುವಂತೆ ನೀಡುತ್ತಿದ್ದ ಸಲಹೆಯನ್ನು ಸೆಹ್ವಾಗ್ ನೆನಪಿಸಿಕೊಂಡಿದ್ದಾರೆ. "34ರ ಹರೆಯದ ವಿರಾಟ್ ಕೊಹ್ಲಿ ಈಗ ರಾಹುಲ್‌ಗೆ ಟೆಸ್ಟ್ ಕ್ರಿಕೆಟ್ ಶೈಲಿಯಲ್ಲಿ ಆಡುವಂತೆ ಸಲಹೆ ನೀಡಿದ್ದಾರೆ. ಈ ಮಾತನ್ನು ವಿರಾಟ್ ಕೊಹ್ಲಿ ಅವರು ನನಗೆ 2008ರಲ್ಲಿಯೇ ಹೇಳಿದ್ದರು. ಟೆಸ್ಟ್ ರೀತಿಯಲ್ಲಿ ಸ್ವಲ್ಪ ನಿಧಾನಕ್ಕೆ ಆಡುವಂತೆ ಅವರು ಹೇಳುತ್ತಿದ್ದರು. ಅದು ಅವರ ಸ್ವಭಾವ. ಅವರು ದೊಡ್ಡ ಹೊಡೆತಗಳಿಗೆ ಮುಂದಾಗುವ ಮುನ್ನ ಸಮಯವನ್ನು ತೆಗೆದುಕೊಳ್ಳುತ್ತಾರೆ. ಅದುವೇ ಅವರನ್ನು ಒಷ್ಟು ದೊಡ್ಡ ಆಟಗಾರನನ್ನಾಗಿ ರೂಪಿಸಿದೆ. ಅವರು ಸಂದರ್ಭಕ್ಕೆ ತಕ್ಕನಾಗಿ ಆಡುತ್ತಾರೆ. ಆರಂಭದಲ್ಲಿ ಹೆಚ್ಚಿನ ಎಸೆತಗಳನ್ನು ಬಳಸಿಕೊಂಡರೂ ಅದನ್ನು ಕೊನೆಯ ಹಂತದಲ್ಲಿ ಸರಿಪಡಿಸಕೊಳ್ಳುತ್ತೇನೆ ಎನ್ನುವುದು ಅವರಿಗೆ ಗೊತ್ತಿದೆ" ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.
ಇನ್ನು ಆಸ್ಟ್ರೇಲಿಯಾ ತಂಡ ನೀಡಿದ 200 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲಿಯೇ ಭಾರೀ ದೊಡ್ಡ ಆಘಾತಕ್ಕೆ ಸಿಲುಕಿತ್ತು. ತಂಡದ ಮೊತ್ತ ಕೇವಲ 5 ರನ್ ಆಗುವಷ್ಟರಲ್ಲಿ ಭಾರತ ತಂಡ 3 ವಿಎಕಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಈ ಸಂದರ್ಭದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಜೋಡಿ ಟೀಮ್ ಇಂಡಿಯಾಗೆ ಅಮೋಘ ಗೆಲುವು ತಂದುಕೊಟ್ಟರು. ವಿರಾಟ್ ಕೊಹ್ಲಿ 85 ರನ್‌ಗಳಿಸಿ ಗೆಲುವಿನ ಸನಿಹದಲ್ಲಿರುವಾಗ ವಿಕೆಟ್ ಕಳೆದುಕೊಂಡರೆ ಕೆಎಲ್ ರಾಹುಲ್ 97 ರನ್‌ಗಳಿಸಿ ಅಜೇಯವಾಗುಳಿದು ಗೆಲುವು ಸಾರಿದರು.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್
ಆಸ್ಟ್ರೇಲಿಯಾ ತಂಡ ಆಡುವ ಬಳಗ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಸೀನ್ ಅಬಾಟ್, ಟ್ರಾವಿಸ್ ಹೆಡ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಇಂಗ್ಲಿಸ್