
ಟೀಮ್ ಇಂಡಿಯಾದ ಆಟಗಾರ ರಿಷಭ್ ಪಂತ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಬಳಗವನ್ನು ಸೇರಿಕೊಂಡಿದ್ದು ಅಭ್ಯಾಸವನ್ನು ಆರಂಭಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಗೆ ಪಂತ್ ಆರಂಭದಲ್ಲಿ ಆಯ್ಕೆಯಾಗಿದ್ದರು ಕೂಡ ಸರಣಿಯ ಆರಂಭದ ಕೊನೆಯ ಕ್ಷಣದಲ್ಲಿ ಅವರನ್ನು ತಂಡದಿಂದ ಬಿಡುಗಡೆಗೊಳಿಸಲಾಗತ್ತು. ಇದಕ್ಕೆ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ಇದೀಗ ಟೆಸ್ಟ್ ಸರಣಿಯ ಹಿನ್ನೆಲೆಯಲ್ಲಿ ಮತ್ತೆ ತಂಡವನ್ನು ಕೂಡಿಕೊಂಡಿದ್ದಾರೆ ಪಂತ್.
ವೈಟ್‌ಬಾಲ್ ಸರಣಿಯಲ್ಲಿ ರಿಷಭ್ ಪಂತ್ ಪದೇ ಪದೇ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ವಿಶ್ವಕಪ್‌ನಲ್ಲಿ ದೊರೆತ ಅವಕಾಶವನ್ನು ಕೈಚೆಲ್ಲಿದ್ದ ಪಂತ್ ಬಳಿಕ ನ್ಯೂಜಿಲೆಂಡ್ ಪ್ರವಾಸದಲ್ಲಿಯೂ ವಿಫಲವಾಗಿದ್ದರು. ಹೀಗಾಗಿ ಪದೇ ಪದೇ ಪಂತ್‌ಗೆ ಅವಕಾಶ ನಿಡುತ್ತಿರುವ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಇದೀಗ ರಿಷಭ್ ಪಂತ್ ಟೆಸ್ಟ್ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ.
ಡಿಸೆಂಬರ್ 14ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಖಾಯಂ ನಾಯಕ ರೋಹಿತ್ ಶರ್ಮಾ ಅಲಭ್ಯವಾಗಲಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಕೈಬೆರಳಿಗೆ ಗಾಯವಾಗಿರುವ ಕಾರಣ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ.
ಕೆಎಲ್ ರಾಹುಲ್ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದು ಅಭಿಮನ್ಯು ಈಶ್ವರನ್ ಅವರನ್ನು ಮೀಸಲು ಆಟಗಾರನನ್ನಾಗಿ ನೇಮಿಸಲಾಗಿದೆ. ಇನ್ನು ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಈ ಸರಣಿಗೆ ಅಲಭ್ಯವಾಗಿರುವ ಕಾರಣ ನವ್‌ದೀಪ್ ಸೈನಿ ಹಾಗೂ ಸೌರಭ್ ಕುಮಾರ್‌ಗೆ ಅವಕಾಶ ದೊರೆತಿದೆ. ಇನ್ನು ಜಯ್‌ದೇವ್ ಉನಾದ್ಕಟ್ ಅವರು 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಭ್ ಕುಮಾರ್, ಜಯದೇವ್ ಉನದ್ಕತ್