ಭಾರತ ಹಾಗೂ ಬಾಂಗ್ಲಾದೇಶ ನಡುವಣ ಮೂರನೇ ಟಿ20 ಪಂದ್ಯ ಶನಿವಾರ ನಡೆಯಲಿದೆ. ಈಗಾಗಲೇ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ಸರಣಿ ವಶಕ್ಕೆ ಪಡೆದಿರುವ ಸೂರ್ಯಕುಮಾರ್ ಯಾದವ್ ಪಡೆ, ಈ ಪಂದ್ಯವನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡುವ ಇರಾದೆಯನ್ನು ಹೊಂದಿದೆ. ಈಗಾಗಲೇ ಟೆಸ್ಟ್ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಸೋಲನ್ನು ಅನುಭವಿಸಿರುವ ಬಾಂಗ್ಲಾ, ಭಾರತ ಪ್ರವಾಸವನ್ನು ಗೆಲುವಿನ ಮೂಲಕ ಕೊನೆ ಗೊಳಿಸಲು ಪ್ಲ್ಯಾನ್ ಮಾಡಿಕೊಂಡಿದೆ.
ಭಾರತ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಸಿಕ್ಕ ಅವಕಾಶವನ್ನು ಎರಡೂ ಕೈ ಗಳಿಂದ ಬಳಸಿಕೊಂಡಿರುವ ಟೀಮ್ ಇಂಡಿಯಾ ಆಟಗಾರರು ಬಾಂಗ್ಲಾ ತಂಡಕ್ಕೆ ಕಾಟ ನೀಡಿದ್ದಾರೆ. ಈ ಸರಣಿಯಲ್ಲಿ ಪದಾರ್ಪಣೆ ಅವಕಾಶವನ್ನು ಪಡೆದ ನಿತೀಶ್ ಕುಮಾರ್ ರೆಡ್ಡಿ, ಮಯಾಂಕ್ ಯಾದವ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಡಿದ್ದಾರೆ. ಎರಡನೇ ಟಿ20 ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಅರ್ಧಶತಕ ಬಾರಿಸಿದ್ದ ನಿತೀಶ್ ಮೇಲೆ ಭರವಸೆ ಹೆಚ್ಚಿದೆ.

ಮೂರನೇ ಪಂದ್ಯಕ್ಕೆ ಮಳೆ ಕಾಟ ನೀಡುವ ಸಾಧ್ಯತೆ ಇದೆ. ಈ ಪಂದ್ಯದ ವೇಳೆ ಮಳೆಯಾಗುವ ಎಲ್ಲ ಸಾಧ್ಯತೆಗಳಿವೆ. ಹವಾಮಾನ ವರದಿ ಪ್ರಕಾರ ಅಕ್ಟೋಬರ್ 12 ರಂದು ಹೈದರಾಬಾದ್ ನಲ್ಲಿ ಶೇ.40 ರಷ್ಟು ಮಳೆಯಾಗುವ ಸಂಭವವಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಪಂದ್ಯ ನಡೆಯದಷ್ಟು ಮಳೆ ಸುರಿದರೆ, ಪಂದ್ಯವನ್ನು ರದ್ದು ಮಾಡಲಾಗುವುದು. ಹೀಗೆ ಆದಲ್ಲಿ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಕನಸು ಕೈಗೂಡುವುದಿಲ್ಲ.
ಈ ಸರಣಿಯಲ್ಲಿ ಯುವ ಆಟಗಾರರ ಪ್ರದರ್ಶನ ಸಮಾಧಾನ ತಂದಿದೆ. ಈಗಾಗಲೇ ಅನುಭವಿ ಆಟಗಾರರು ಟಿ20 ಕ್ರಿಕೆಟ್‌ಗೆ ಗುಡ್ ಬಾಯ್ ಹೇಳಿದ್ದಾರೆ. ಇವರ ಸ್ಥಾನವನ್ನು ತುಂಬುವ ಯುವ ಆಟಗಾರರು ಯಾರು ಎಂಬ ಪ್ರಶ್ನೆ ನಿಜಕ್ಕೂ ಮ್ಯಾನೇಜ್ಮೆಂಟ್ ತಲೆ ಕೆಡಿಸಿತ್ತು. ಆದರೆ ಈ ಸರಣಿಯ ಮೂಲಕ ಯುವಕರು ತಾವು ಜವಾಬ್ದಾರಿ ಹೊರಲು ತಯಾರಿ ಇರುವುದಾಗಿ ತಿಳಿಸಿದ್ದಾರೆ.

ಈ ಸರಣಿಯಲ್ಲಿ ಅಭಿಷೇಕ್ ಶರ್ಮಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅಬ್ಬರದ ಪ್ರದರ್ಶನವನ್ನು ನೀಡಿ, ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ವೇಗಿ ಮಯಾಂಕ್ ಯಾದವ್ ಸಹ ಬಿಗುವಿನ ದಾಳಿ ನಡೆಸಿದ್ದರು. ಹೈದರಾಬಾದ್ ಅಂಗಳ ನಿತೀಶ್ ಕುಮಾರ್ ಹಾಗೂ ಅಭಿಷೇಕ್ ಶರ್ಮಾಗೆ ಫೆವರೀಟ್ ಸ್ಟೇಡಿಯಂ. ಕಾರಣ ಇವರು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಾರೆ. ಈ ಇಬ್ಬರೂ ಆಟಗಾರರು ಹೈದರಾಬಾದ್‌ನಲ್ಲಿ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂಬ ಭರವಸೆ ಅಭಿಮಾನಿಗಳದ್ದು.
ಭಾರತದ ಸಂಭಾವ್ಯ ತಂಡ: ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ನಿತೀಶ್ ಕುಮಾರ್ ರೆಡ್ಡಿ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.
ಬಾಂಗ್ಲಾದೇಶದ ಸಂಭಾವ್ಯ ತಂಡ: ಪರ್ವೇಜ್ ಹೊಸೈನ್ ಎಮನ್, ಲಿಟನ್ ದಾಸ್ (ವಿಕೆಟ್ ಕೀಪರ್), ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತೌಹೀದ್ ಹೃದಯೊಯ್, ಮಹಮ್ಮದುಲ್ಲಾ, ಮೆಹದಿ ಹಸನ್ ಮಿರಾಜ್, ಮಹೆದಿ ಹಸನ್, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ತಂಝಿಮ್ ಹಸನ್ ಶಕೀಬ್, ಮುಸ್ತಾಫ್ ಶಕೀಬ್.