
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲುವ ಮೂಲಕ ಸರಣಿ ವಶಕ್ಕೆ ಪಡೆದುಕೊಂಡಿದೆ. ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ತೀವ್ರ ಕುಸಿತ ಕಂಡ ಕಾರಣ ಸೋಲಿನ ಅಂಚಿಗೆ ತಲುಪಿತ್ತು. ಆದರೆ ಅಂತಿಮವಾಗಿ ಶ್ರೇಯಸ್ ಐಯ್ಯರ್ ಹಾಗೂ ಆರ್ ಅಶ್ವಿನ್ ಅವರ ಬ್ಯಾಟಿಂಗ್ ಸಾಹಸದ ಕಾರಣದಿಂದಾಗಿ ಟೀಮ್ ಇಂಡಿಯಾ ಸೋಲಿನಿಂದ ಪಾರಾಗಿದೆ.
ಈ ಪಂದ್ಯದ ಬಳಿಕ ಮಾತನಾಡಿರುವ ಉಪನಾಯಕ ಚೇತೇಶ್ವರ್ ಪೂಜಾರ ಎರಡನೇ ಇನ್ನಿಂಗ್ಸ್‌ನಲ್ಲಿ ಅಕ್ಷರ್ ಪಟೇಲ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ನಿರ್ಧಾರ ಅತ್ಯಂತ ನಿರ್ಣಾಯಕ ಪಾತ್ರವಹಿಸಿತು ಎಂದಿದ್ದಾರೆ. ವಿರಾಟ್ ಕೊಹ್ಲಿಗಿಂತ ಮುನ್ನ ಅಕ್ಷರ್ ಪಟೇಲ್ ಕಣಕ್ಕಿಳಿದು ಬ್ಯಾಟಿಂಗ್ ನಡೆಸಿದ್ದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿತು ಎಂದಿದ್ದಾರೆ.
"ಅದು ಬಹಳ ಮಹತ್ವದ ನಿರ್ಧಾರವಾಗಿತ್ತು ಯಾಕೆಂದರೆ ಅವರ ಮೂವರು ಸ್ಪಿನ್ನರ್‌ಗಳ ಪೈಕಿ ಇಬ್ಬರು ಎಡಗೈ ಸ್ಪಿನ್ನರ್‌ಗಳಾಗಿದ್ದರು. ಅಕ್ಷರ್ ಎಡಗೈ ಆಟಗಾರನಾಗಿರುವ ಕಾರಣ ಅವರನ್ನು ನಿಭಾಯಿಸಲು ಮತ್ತು ಕೂಕಬುರಾ ಚೆಂಡಿನಲ್ಲಿ ಆರಂಭಿಕ ಹಂತದಲ್ಲಿ ತಾಳ್ಮೆಯ ಆಟವನ್ನಾಡುವ ಕಾರಣ ಅಕ್ಷರ್ ಪಟೇಲ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಲಾಗಿತ್ತು. ಇದು ಮಹತ್ವದ ಪಾತ್ರವಹಿಸಿತು" ಎಂದಿದ್ದಾರೆ ಚೇತೇಶ್ವರ್ ಪೂಜಾರ.
ಈ ಇನ್ನಿಂಗ್ಸ್‌ನಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಕ್ಷರ್ ಪಟೇಲ್ 34 ರನ್‌ಗಳನ್ನು ಗಳಿಸಿದರು. ಇತರ ಆಟಗಾರರು ಕ್ರೀಸ್‌ನಲ್ಲಿ ನೆಲೆಯೂರಲು ಸಂಪೂರ್ಣವಾಗಿ ವಿಫಲವಾದ ಸಂದರ್ಭದಲ್ಲಿ ಅಕ್ಷರ್ ಪಟೇಲ್ ಅವರಿಂದ ಬಂದ ಈ ಪ್ರದರ್ಶನ ತಂಡವನ್ನು ಆರಂಭಿಕ ಹಂತದಲ್ಲಿ ಕಾಪಾಡುವಲ್ಲಿ ಯಶಸ್ವಿಯಾಯಿತು. ಆದರೆ ಇತರ ಆಟಗಾರರಿಂದ ಪ್ರದರ್ಶನ ಬಾರದ ಕಾರಣ ತಂಡ ತೀವ್ರ ಕುಸಿತ ಕಂಡಿತು.
ಒಂದು ಹಂತದಲ್ಲಿ 145 ರನ್‌ಗಳ ಸುಲಭ ಗುರಿ ಹೊಂದಿದ ಹೊರತಾಗಿಯೂ ಭಾರತ ಸೋಲಿನತ್ತ ಮುಖಮಾಡಿತ್ತು. 74 ರನ್‌ಗಳಿಗೆ ಟೀಮ್ ಇಂಡಿಯಾ 7 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಆದರೆ ಬಳಿಕ ಜೊತೆಯಾದ ಶ್ರೇಯಸ್ ಐಯ್ಯರ್ ಹಾಗೂ ಆರ್ ಅಶ್ವಿನ್ ಟೀಮ್ ಇಂಡಿಯಾದ ಗೆಲುವಿಗೆ ಕಾರಣವಾದರು. ಈ ಜೋಡಿ ಮುರಿಯದ 8 ನೇ ವಿಕೆಟ್‌ಗೆ 105 ಎಸೆತಗಳಲ್ಲಿ 71 ರನ್ ಸಿಡಿಸಿದರು. ಈ ಮೂಲಕ ಭಾರತ ತಂಡದ ಗೆಲುವನ್ನು ಘೋಷಿಸಿದರು. ಈ ಪಂದ್ಯದಲ್ಲಿ ಭಾರತ ಗೆಲುವಿಗೆ ಕಾರಣವಾದ ಶ್ರೇಯಸ್ ಐಯ್ಯರ್ 46 ಎಸೆತಗಳಲ್ಲಿ 29 ರನ್‌ಗಳಿಸಿದರೆ ಆರ್ ಅಶ್ವಿನ್ 62 ಎಸೆತಗಳಲ್ಲಿ 46 ರನ್‌ಗಳಿಸಿದ್ದಾರೆ. ಈ ಮೂಲಕ ರೋಚಕ ಗೆಲುವಿಗೆ ಕಾರಣವಾದರು.
ಇತ್ತಂಡಗಳ ಆಡುವ ಬಳಗ ಟೀಮ್ ಇಂಡಿಯಾ ಕೆಎಲ್ ರಾಹುಲ್(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಬ್ ಪಂತ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ, ಜಾಕಿರ್ ಹಸನ್, ಮೊಮಿನುಲ್ ಹಕ್, ಲಿಟ್ಟನ್ ದಾಸ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್(ನಾಯಕ), ನೂರುಲ್ ಹಸನ್(ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ತಸ್ಕಿನ್ ಅಹ್ಮದ್