ಪ್ರಸ್ತುತ ಭಾರತ ಟಿ20 ಚಾಂಪಿಯನ್ ತಂಡ. ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತ್ತು. ಇದಾದ ಬಳಿಕ ಭಾರತ ತಂಡದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ಶ್ರೀಲಂಕಾ ಪ್ರವಾಸ ವೇಳೆ ಭಾರತ ಟಿ20 ತಂಡಕ್ಕೆ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಹೊಸ ನಾಯಕನ್ನಾಗಿ ಮಾಡಲಾಗಿತ್ತು. ಇದೀಗ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಬಾಂಗ್ಲಾದೇಶವನ್ನು ಎದುರಿಸಲು ಸಜ್ಜಾಗಿದೆ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಅಕ್ಟೋಬರ್ 6 ರಂದು ಗ್ವಾಲಿಯರ್‌ನ ನ್ಯೂ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಟಿ20 ಪಂದ್ಯ ಸಂಜೆ 7:00 ಗಂಟೆಗೆ ನಡೆಯಲಿದೆ.

ಈ ಹಿಂದೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶವನ್ನು 2-0 ಅಂತರದಿಂದ ವೈಟ್ ವಾಶ್ ಮಾಡಿತ್ತು. ಈಗ ಟಿ20 ತಂಡದ ಕಮಾಂಡ್ ಸೂರ್ಯಕುಮಾರ್ ಯಾದವ್ ಕೈಯಲ್ಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾದೇಶವನ್ನು 3-0 ಅಂತರದಿಂದ ಗೆಲ್ಲುವ ನಿರೀಕ್ಷೆಯಲ್ಲಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವೆ ಇದುವರೆಗೆ 14 ಟಿ20 ಪಂದ್ಯಗಳು ನಡೆದಿದೆ. ಬಾಂಗ್ಲಾದೇಶ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತ 13 ಪಂದ್ಯಗಳನ್ನು ಗೆದ್ದು ಪ್ರಾಬಲ್ಯ ಸಾಧಿಸಿದೆ. ಎರಡು ತಂಡಗಳ ನಡುವಿನ ಕೊನೆಯ ಟಿ20 ಪಂದ್ಯವು 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಡೆದಿತ್ತು. ಈ ಪಂದ್ಯವನ್ನು ಟೀಮ್ ಇಂಡಿಯಾ 50 ರನ್‌ಗಳಿಂದ ಗೆದ್ದು ಬೀಗಿತ್ತು.
2019ರಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಏಕೈಕ ಟಿ20 ಪಂದ್ಯವನ್ನು ಸೋತಿತ್ತು. ಆಗ ರೋಹಿತ್ ಶರ್ಮಾ ಭಾರತ ತಂಡದ ನಾಯಕರಾಗಿದ್ದರು. ಈ ಪಂದ್ಯ ದೆಹಲಿಯಲ್ಲಿ ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ಭಾರತ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತ್ತು. ಬಾಂಗ್ಲಾದೇಶ ಕೇವಲ ಮೂರು ವಿಕೆಟ್ ನಷ್ಟದಲ್ಲಿ ಈ ಗುರಿಯನ್ನು ಸಾಧಿಸಿತ್ತು.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಸರಣಿಯಲ್ಲಿ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ. ಅವರು ಆಡಿರುವ 6 ಪಂದ್ಯಗಳಲ್ಲಿ ಗರಿಷ್ಠ 9 ವಿಕೆಟ್ ಪಡೆದಿದ್ದಾರೆ. ಆದರೆ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ದೀಪಕ್ ಚಹಾರ್ ಹೆಸರಿನಲ್ಲಿದೆ. ಅವರು 3 ಪಂದ್ಯಗಳಲ್ಲಿ 8 ವಿಕೆಟ್ ಉರುಳಿಸಿದ್ದಾರೆ. ಬಾಂಗ್ಲಾದೇಶದ ಪರ ವೇಗಿ ಅಲ್-ಅಲೀಮ್-ಹುಸೇನ್ 7 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಅವರು 13 ಪಂದ್ಯಗಳಲ್ಲಿ 36.69 ಸರಾಸರಿಯಲ್ಲಿ 477 ರನ್ ಗಳಿಸಿದ್ದಾರೆ. ಸದ್ಯ ರೋಹಿತ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಬಾಂಗ್ಲಾದೇಶದ ಪರ ಶಬ್ಬೀರ್ ರೆಹಮಾನ್ 6 ಪಂದ್ಯಗಳಲ್ಲಿ 236 ರನ್ ಗಳಿಸಿದ್ದಾರೆ.