ತವರು ನೆಲದಲ್ಲಿ ತ್ವರಿತಗತಿಯಲ್ಲಿ 250 ವಿಕೆಟ್ ಕಿತ್ತ ಅಶ್ವಿನ್

ಇಂದೋರ್, ನವೆಂಬರ್ 14: ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದೇ ಸಾಧನೆ ಮೆರೆದಿದ್ದಾರೆ.
ತವರು ನೆಲದಲ್ಲಿ ತ್ವರಿತಗತಿಯಲ್ಲಿ 250 ಗಳಿಸಿದ ಸಾಧನೆ ಮಾಡಿದ್ದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯ ಸಮಕ್ಕೆ ನಿಂತಿದ್ದಾರೆ. ಈ ಮೂಲಕ ಜಂಟಿಯಾಗಿ ಈ ಸಾಧನೆ ಹಂಚಿಕೊಂಡಿದ್ದಾರೆ.
ಬಾಂಗ್ಲಾದೇಶದ ನಾಯಕ ಮೊಮಿನುಲ್ ಹಕ್ ಅವರನ್ನು 37 ರನ್ ಗಳಿಗೆ ಔಟ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 250 ವಿಕೆಟ್ ಗಳಿಸಿದರು. ಮುರಳೀಧರನ್ ಹಾಗೂ ಅಶ್ವಿನ್ ಇಬ್ಬರೂ 42 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಆದರೆ, ಭಾರತೀಯ ಬೌಲರ್ ಗಳ ಪೈಕಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರು 43 ಟೆಸ್ಟ್ ಗಳಲ್ಲಿ ಈ ಸಾಧನೆ ಮಾಡಿದ್ದರು. ಅಶ್ವಿನ್ ಈ ದಾಖಲೆ ಮುರಿದು ತ್ವರಿತಗತಿಯಲ್ಲಿ ಈ ಸಾಧನೆ ಮಾಡಿದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
ತವರು ನೆಲದಲ್ಲಿ ತ್ವರಿತಗತಿಯಲ್ಲಿ 250 ವಿಕೆಟ್ ಪಡೆದವರು:
42: ಮುತ್ತಯ್ಯ ಮುರಳೀಧರನ್(ಶ್ರೀಲಂಕಾ)/ ಆರ್ ಅಶ್ವಿನ್ (ಭಾರತ)
43: ಅನಿಲ್ ಕುಂಬ್ಳೆ(ಭಾರತ)
44: ರಂಗಣಾ ಹೆರಾತ್ (ಶ್ರೀಲಂಕಾ)
49: ಡೇಲ್ ಸ್ಟೇನ್(ದಕ್ಷಿಣ ಆಫ್ರಿಕಾ)
51: ಹರ್ಭಜನ್ ಸಿಂಗ್ (ಭಾರತ)
ತಮಿಳುನಾಡಿನ 33 ವರ್ಷ ವಯಸ್ಸಿನ ಸ್ಪಿನ್ನರ್ ಆರ್ ಅಶ್ವಿನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ವಿಶಾಖಪಟ್ಟಣಂ ಟೆಸ್ಟ್ ಮೂಲಕ ಕಮ್ ಬ್ಯಾಕ್ ಮಾಡಿದ್ದಲ್ಲದೆ, 27ನೇ ಬಾರಿಗೆ ಐದು ವಿಕೆಟ್ ಗಳನ್ನು ಪಡೆದ ಸಾಧನೆ ಮಾಡಿದರು. ಜೊತೆಗೆ 66 ಟೆಸ್ಟ್ ಗಳಲ್ಲಿ 350 ವಿಕೆಟ್ ಕಿತ್ತು ಮುರಳೀಧರನ್ ದಾಖಲೆ ಸಮಕ್ಕೆ ನಿಂತಿದ್ದನ್ನು ಇಲ್ಲಿ ಸ್ಮರಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications