Rohit Sharma: ರೋಹಿತ್ ಶರ್ಮಾ 8 ಸಿಕ್ಸರ್ ಬಾರಿಸಿದರೆ ಸೆಹ್ವಾಗ್ ದಾಖಲೆ ಉಡೀಸ್
ಟಿ20 ವಿಶ್ವಕಪ್ ಗೆಲುವಿನ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಇದಾದ ನಂತರ ಶ್ರೀಲಂಕಾ ಪ್ರವಾಸದ ವೇಳೆ ಅವರು ಏಕದಿನ ಸರಣಿ ಮೂಲಕ ಭಾರತ ತಂಡಕ್ಕೆ ಮರಳಿದ್ದರು. ಆದರೆ ಈ ಸರಣಿಯಲ್ಲಿ ಅವರು ತಮ್ಮ ಬ್ಯಾಟಿಂಗ್ ಖದರ್ ತೋರಲಿಲ್ಲ.
ಇತ್ತೀಚೆಗೆ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇದರೊಂದಿಗೆ ಅವರು ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ನಾಲ್ಕನೇ ಬಾರಿಗೆ ಎರಡೂ ಇನ್ನಿಂಗ್ಸ್‌ಗಳಲ್ಲಿ (5-6) ಒಂದಂಕಿ ಸ್ಕೋರ್‌ಗಳಿಗೆ ಔಟಾಗಿದ್ದರು.

ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿ ಸಂಭ್ರಮಿಸುವುದನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾಯುತ್ತಿದ್ದರು. ಆದರೆ, ತಮ್ಮ ಅಭಿಮಾನಿಗಳ ಆಸೆಯನ್ನು ಈಡೇರಿಸುವಲ್ಲಿ ರೋಹಿತ್ ಹಿಂದೆ ಉಳಿದಿದ್ದರು. ಇದೀಗ ಮತ್ತೊಮ್ಮೆ ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಅವಕಾಶನ್ನು ರೋಹಿತ್ ಹೊಂದಿದ್ದಾರೆ. ಜೊತೆಗೆ ವಿಶೇಷ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಸೆಹ್ವಾಗ್ ದಾಖಲೆ ಉಡೀಸ್
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 27 ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಲಿದ್ದಾರೆ. ಈ ಸಾಧನೆಯ ಮೂಲಕ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ರೋಹಿತ್ ಮುರಿಯಲಿದ್ದಾರೆ.
ರೋಹಿತ್ ಶರ್ಮಾ 8 ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್ ಆಗಲಿದ್ದಾರೆ. ಇದರೊಂದಿಗೆ ವೀರೇಂದ್ರ ಸೆಹ್ವಾಗ್ ಅವರನ್ನು ರೋಹಿತ್ ಹಿಂದಿಕ್ಕಲಿದ್ದಾರೆ. ರೋಹಿತ್ ಶರ್ಮಾ ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ 84 ಸಿಕ್ಸರ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಆದರೆ, ಸೆಹ್ವಾಗ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 91 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಕಾನ್ಪುರ ಟೆಸ್ಟ್‌ನಲ್ಲಿ ಭಾರತ ಪರ ಎರಡು ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರೆ, ಈ ದಾಖಲೆಯನ್ನು ಸುಲಭವಾಗಿ ಮಾಡಬಹುದು. ಜೊತೆಗೆ ನ್ಯೂಜಿಲೆಂಡ್‌ನ ಟಿಮ್ ಸೌಥಿ (88), ಕ್ರಿಸ್ ಕ್ರೇನ್ಸ್ (87), ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ (87), ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ (84) ಅವರ ದಾಖಲೆಯನ್ನು ಅಳಿಸಿ ಹಾಕಬಹುದು.
ಸ್ಟೋಕ್ಸ್ ಹೆಸರಿನಲ್ಲಿ ದಾಖಲೆ
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿರುವ ವಿಶ್ವ ದಾಖಲೆ ಇಂಗ್ಲೆಂಡ್ ಆಲ್‌ರೌಂಡರ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 131 ಸಿಕ್ಸರ್‌ಗಳನ್ನು ಚಚ್ಚಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಗಳಿಸಿರುವ ವಿಶ್ವ ದಾಖಲೆಯನ್ನು ರೋಹಿತ್ ಶರ್ಮಾ ಹೊಂದಿದ್ದಾರೆ. ಅವರು 620 ಸಿಕ್ಸರ್ ಹೊಡೆದಿದ್ದರೆ, ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ 553 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications