ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಐದು ಪಂದ್ಯಗಳನ್ನು ಆಡಲಾಗುತ್ತಿದ್ದು, ಟೀಮ್ ಇಂಡಿಯಾ ಈಗಾಗಲೇ 1-2 ರಿಂದ ಹಿನ್ನಡೆಯನ್ನು ಅನುಭವಿಸುತ್ತಿದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಪಂದ್ಯವನ್ನು ಆಡಲಿದೆ. ಈ ಸರಣಿಯಲ್ಲಿ ಏಕದಿನ ಹಾಗೂ ಟಿ20 ಸರಣಿ ನಡೆಯಲಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಜನವರಿ 3 ರಂದು ಕೊನೆಯ ಟೆಸ್ಟ್ ಪಂದ್ಯವನ್ನು ಸಿಡ್ನಿ ಅಂಗಳದಲ್ಲಿ ಆಡಲಿದೆ. ಈ ಸರಣಿ ಮುಗಿದ ನಂತರ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿ ಆಗಲಿವೆ. ಈ ವೇಳೆ ಟೀಮ್ ಇಂಡಿಯಾ ಮೊದಲು 5 ಟಿ20 ಪಂದ್ಯಗಳ ಸರಣಿ ಹಾಗೂ ಬಳಿಕ ಏಕದಿನ ಸರಣಿ ಆಡಲಿದೆ. ಮುಂದಿನ ವರ್ಷದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ದೃಷ್ಟಿಯಿಂದ ಭಾರತ ಹಾಗೂ ಇಂಗ್ಲೆಂಡ್ ಸರಣಿ ಮಹತ್ವ ಪಡೆದಿದೆ. ಈಗ ಬಹು ನೀರಿಕ್ಷಿತ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ವೇಳಾಪಟ್ಟಿ ಬಿಡುಗಡೆ ಆಗಿದೆ.

ಭಾರತ ಪ್ರವಾಸವನ್ನು ಇಂಗ್ಲೆಂಡ್ ಮುಂದಿನ ವರ್ಷದಲ್ಲಿ ಆರಂಭಿಸಲಿದೆ. ಈ ಸರಣಿಯ ಏಕದಿನ ಪಂದ್ಯ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ಈಗಾಗಲೇ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಉಭಯ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಜನವರಿ 22 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 25ರಂದು ಚೆನ್ನೈನಲ್ಲಿ, ಸರಣಿಯ ಮೂರನೇ ಪಂದ್ಯ ಜನವರಿ 28 ರಂದು ರಾಜ್‌ಕೋಟ್‌ನಲ್ಲಿ, ನಾಲ್ಕನೇ ಪಂದ್ಯ ಪುಣೆಯಲ್ಲಿ ಜನವರಿ 31ರಂದು, ಐದನೇ ಪಂದ್ಯ ಫೆಬ್ರವರಿ 2 ರಂದು ಮುಂಬೈನಲ್ಲಿ ನಡೆಯಲಿದೆ.
ಈ ಬಾರಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಆದರೆ ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೂ ಮೊದಲು ಭಾರತ ತವರಿನಲ್ಲಿ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ.

ಉಭಯ ದೇಶಗಳ ನಡುವಿನ ಏಕದಿನ ಸರಣಿ ಫೆಬ್ರವರಿ 6 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯಕ್ಕೆ ನಾಗ್ಪುರ ಅಂಗಳ ಸಾಕ್ಷಿಯಾಗಲಿದೆ. ಎರಡನೇ ಏಕದಿನ ಪಂದ್ಯ ಫೆಬ್ರವರಿ 9 ರಂದು ಕಟಕ್‌ನಲ್ಲಿ, ಮೂರನೇ ಏಕದಿನ ಪಂದ್ಯ ಫೆಬ್ರವರಿ 12 ರಂದು ನಡೆಯಲಿದೆ. ಇದಾದ ಬಳಿಕ ಟೀಂ ಇಂಡಿಯಾ ನೇರವಾಗಿ ಚಾಂಪಿಯನ್ಸ್ ಟ್ರೋಫಿ ಅಖಾಡ ಪ್ರವೇಶಿಸಲಿದೆ. ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 20 ರಿಂದ ಆರಂಭವಾಗಲಿದೆ.
ಉಭಯ ದೇಶಗಳ ನಡುವಣ ಟಿ20 ಪಂದ್ಯಗಳು ಸಂಜೆ 7 ಗಂಟೆಯಿಂದ ಆರಂಭವಾಗಲಿವೆ. ಇದಕ್ಕೂ ಅರ್ಧ ಗಂಟೆ ಮೊದಲು ಅಂದರೆ 6.30ಕ್ಕೆ ಟಾಸ್ ನಡೆಯಲಿದೆ. ಏಕದಿನ ಪಂದ್ಯಗಳು ಮಧ್ಯಾಹ್ನ 1.30 ರ ಸುಮಾರಿಗೆ ಆರಂಭವಾಗಲಿವೆ.