IND vs ENG: 2ನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿ ಇದೆಯಾ? ಪಿಚ್ ವರದಿ, ಬೌಂಡರಿ ಲೆಂತ್ ಮಾಹಿತಿ ಇಲ್ಲಿದೆ

ಇಂಗ್ಲೆಂಡ್ ಪ್ರವಾಸ ಕೈಗೊಂಡು ಕಳೆದ ವರ್ಷದಿಂದ ಮುಂದೂಡಲ್ಪಟ್ಟಿದ್ದ ಐದನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಸೋತು ಮುಖಭಂಗಕ್ಕೊಳಗಾಗಿದ್ದ ಟೀಮ್ ಇಂಡಿಯಾ ಇದೀಗ ಟಿ ಟ್ವೆಂಟಿ ಸರಣಿಯ ಪ್ರಥಮ ಪಂದ್ಯದಲ್ಲಿ ಗೆಲುವು ಸಾಧಿಸುವುದರ ಮೂಲಕ ಸೇಡನ್ನು ತೀರಿಸಿಕೊಂಡಿದೆ.
ಹೌದು, ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಪ್ರಥಮ ಪಂದ್ಯ ನಿನ್ನೆ ( ಜುಲೈ 7 ) ಸೌತಾಂಪ್ಟನ್ ಏಜೀಸ್ ಬೌಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮ ಮೊದಲು ಬ್ಯಾಟಿಂಗ್ ಆಯ್ದುಕೊಂಡರು ಹಾಗೂ ಟೀಮ್ ಇಂಡಿಯಾ ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್ ಕಲೆಹಾಕಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 199 ರನ್‌ಗಳ ಗುರಿಯನ್ನು ನೀಡಿತು. ಆದರೆ ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್ 19.3 ಓವರ್‌ಗಳಲ್ಲಿ 148 ರನ್ ಕಲೆಹಾಕಿ 50 ರನ್‌ಗಳ ಹೀನಾಯ ಸೋಲನ್ನು ಕಂಡಿತು.
ಹೀಗೆ ಪ್ರಥಮ ಪಂದ್ಯದಲ್ಲಿ ಉತ್ತಮ ಜಯ ಸಾಧಿಸಿ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿರುವ ಟೀಮ್ ಇಂಡಿಯಾ ನಾಳೆ ( ಜುಲೈ 9 ) ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಕೂಡ ಜಯ ಸಾಧಿಸಿ ಸರಣಿಯನ್ನು ಕೈವಶ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದ್ದರೆ, ಅತ್ತ ಇದೇ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾಗೆ ಟೆಸ್ಟ್ ಪಂದ್ಯದಲ್ಲಿ ಸೋಲುಣಿಸಿದ್ದ ಇಂಗ್ಲೆಂಡ್ ಈ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವತ್ತ ಕಣ್ಣಿಟ್ಟಿದೆ. ಹೀಗೆ ಮಹತ್ವವನ್ನು ಪಡೆದುಕೊಂಡಿರುವ ಈ ಪಂದ್ಯದ ಕುರಿತ ಪಿಚ್ ವರದಿ, ಹವಾಮಾನ ವರದಿ, ಕ್ರೀಡಾಂಗಣದ ಬೌಂಡರಿ ಲೆಂತ್ ಹಾಗೂ ಸಂಭಾವ್ಯ ಆಡುವ ಬಳಗದ ವಿವರ ಕೆಳಕಂಡಂತಿದೆ.

ಹವಾಮಾನ ವರದಿ
ಹವಾಮಾನ ವರದಿ: ಇದೇ ಎಡ್ಜ್ ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯುಂಟಾಗಿದ್ದ ಕಾರಣ ಈ ಪಂದ್ಯದಲ್ಲೂ ಮಳೆ ಅಡ್ಡಿಯನ್ನುಂಟು ಮಾಡುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡುವುದಿಲ್ಲ ಎನ್ನುತ್ತಿದೆ ಹವಾಮಾನ ವರದಿ. 40% ಮೋಡ ಕವಿದ ವಾತಾವರಣವಿರಲಿದ್ದು, ಪಂದ್ಯದ ಸಮಯದಲ್ಲಿ 21° ಉಷ್ಣಾಂಶವಿರಲಿದೆ ಹಾಗೂ ಯಾವುದೇ ಮಳೆಯ ಸಂಭವ ಇರುವುದಿಲ್ಲ.

ಪಿಚ್ ವರದಿ & ಕ್ರೀಡಾಂಗಣದ ಬೌಂಡರಿ ಲೆಂತ್
ಇದೇ ಪಿಚ್‌ನಲ್ಲಿ ನಡೆದ ಇತ್ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ ರನ್ ಹೊಳೆ ಹರಿದದ್ದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಅದೇ ರೀತಿ ಈ ಪಂದ್ಯದಲ್ಲಿಯೂ ಸಹ ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಾಗಿ ಸಹಕರಿಸಲಿದ್ದು, ಬೌಲರ್‌ಗಳಿಗೆ ತಲೆನೋವಾಗಲಿದೆ.
ಕ್ರೀಡಾಂಗಣದ ಬೌಂಡರಿ ಲೆಂತ್:ಕ್ರೀಡಾಂಗಣದ ಸ್ಟ್ರೈಟ್ ಮತ್ತು ಸೈಡ್ ಬೌಂಡರಿಗಳು 59-60 ಮೀಟರ್ ಉದ್ದದಷ್ಟು ಇರಲಿದ್ದು, ಸ್ಕ್ವೇರ್ ಬೌಂಡರಿ 50 ಮೀಟರ್‌ಗಿಂತ ಕಡಿಮೆ ಇದೆ ಹಾಗೂ ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನ ಅತ್ಯಂತ ಕಡಿಮೆ ಉದ್ದದ ಬೌಂಡರಿಗಳಲ್ಲಿ ಒಂದಾಗಿದ್ದು, ಬ್ಯಾಟ್ಸ್‌ಮನ್‌ಗಳು ಈ ಭಾಗದಲ್ಲಿಯೇ ಹೆಚ್ಚಿನ ಸಿಕ್ಸರ್ ಬಾರಿಸಲಿದ್ದು, ರನ್ ಹೊಳೆ ಹರಿಯಲಿದೆ.

ನೇರಪ್ರಸಾರದ ಮಾಹಿತಿ
ಇತ್ತಂಡಗಳ ನಡುವಿನ ಈ ಪಂದ್ಯ ನಾಳೆ ( ಜುಲೈ 9 ) ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಆರಂಭವಾಗಲಿದೆ. ಈ ಪಂದ್ಯದ ನೇರಪ್ರಸಾರವನ್ನು ಭಾರತದಲ್ಲಿ ಸೋನಿ ನೆಟ್‌ವರ್ಕ್ ಚಾನೆಲ್ ಹಾಗೂ ಸೋನಿ ಲೀವ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications