IND vs ENG T20: ಚೆನ್ನೈನಲ್ಲಿ ಯಾರು ಹಾಕ್ತಾರೆ ಗೆಲುವಿನ ಜೈಕಾರ?
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯ ಶನಿವಾರ ನಡೆಯಲಿದೆ. ಈ ಪಂದ್ಯಕ್ಕೆ ಚೆನ್ನೈನ ಎಂ ಚಿದಂಬರಂ ಮೈದಾನ ಆತಿಥ್ಯ ವಹಿಸಲಿದೆ. ಈಗಾಗಲೇ ಮೊದಲ ಟಿ20 ಪಂದ್ಯವನ್ನು ಗೆದ್ದು ಕೊಂಡಿರುವ ಟೀಮ್ ಇಂಡಿಯಾ, ಎರಡನೇ ಟಿ20 ಪಂದ್ಯವನ್ನು ಗೆದ್ದು ಸರಣಿ ಗೆಲುವಿನ ಕನಸು ಕಾಣುತ್ತಿದೆ. ಇಂಗ್ಲೆಂಡ್ ಈ ಪಂದ್ಯದಲ್ಲಿ ಆರ್ಭಟಿಸುವ ಪ್ಲ್ಯಾನ್ ಮಾಡಿಕೊಂಡಿದೆ.
ಉಭಯ ತಂಡಗಳು ಬಲಿಷ್ಠವಾಗಿವೆ. ಈಗಾಗಲೇ ಉಭಯ ತಂಡಗಳು 25 ಬಾರಿ ಮುಖಾಮುಖಿ ಆಗಿದ್ದು, ಭಾರತ 14ರಲ್ಲಿ ಜಯ ಸಾಧಿಸಿದೆ. ಇಂಗ್ಲೆಂಡ್ 11 ಪಂದ್ಯಗಳನ್ನು ಗೆದ್ದು ಕೊಂಡಿದೆ. ಟೀಮ್ ಇಂಡಿಯಾ ಯುವ ಪಡೆಯನ್ನು ಹೊಂದಿದ್ದು, ಬೌಲಿಂಗ್ ಹಾಗೂ ಬ್ಯಾಟಿಂಗ್ ಸೂಪರ್ ಆಗಿದೆ. ತವರಿನಲ್ಲಿ ಮತ್ತೊಂದು ಟಿ20 ಸರಣಿ ಗೆಲುವಿನ ಆಸೆಗೆ ಪುಷ್ಠಿ ನೀಡಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.

ಅಭಿಷೇಕ್ ಮೇಲೆ ಕಣ್ಣು
ಕೋಲ್ಕತ್ತಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ಇನಿಂಗ್ಸ್ ಆರಂಭಿಸಿದ್ದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಭಿಷೇಕ್ ಮೊದಲ ಟಿ20 ಪಂದ್ಯ ಆರ್ಭಟ ನಡೆಸಿದ್ದರು. ಅಲ್ಲದೆ ತಮ್ಮ ಗುರುವಿನ ದಾಖಲೆಯನ್ನು ಅಳಿಸಿ ಹಾಕಿದ್ದರು. ಸಂಜು ಮೊದಲ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ಹಿಂದೆ ಬಿದ್ದಿದ್ದರು. ಹೀಗಾಗಿ ಇವರ ಮೇಲೆ ಒತ್ತಡವಿದೆ.
ಮೂರನೇ ಕ್ರಮಾಂಕದಲ್ಲಿ ಆಡುವುದು ಯಾರು?
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಯಾರು ಎಂಬ ಪ್ರಶ್ನೆಗೆ ನಿಶ್ಚಿತ ಉತ್ತರ ಸಿಕ್ಕಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದ ಕೊನೆಯ ಎರಡು ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ತಿಲಕ್ ವರ್ಮಾ, ಶತಕ ಬಾರಿಸಿ ಅಬ್ಬರಿಸಿದ್ದರು. ಆದರೆ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಈಡನ್ ಅಂಗಳದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಸೂರ್ಯ ನಿರಾಸೆ ಅನುಭವಿಸಿದ್ದರು.
ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಅಂದಾಗ ಮಾತ್ರ ಮತ್ತೊಂದು ಗೆಲುವಿನ ಆಸೆ ಈಡೇರುತ್ತದೆ.

ಶಮಿಗೆ ಸಿಗುತ್ತಾ ಚಾನ್ಸ್?
ಟೀಮ್ ಇಂಡಿಯಾದಲ್ಲಿ ಕಂ ಬ್ಯಾಕ್ ಮಾಡಿರುವ ಶಮಿಗೆ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆ ಓಡಾಡುತ್ತಿದೆ. ಆದರೆ ಗೆಲುವಿನ ತಂಡವನ್ನೇ ನಾಯಕ ಮುಂದುವರೆಸುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಚೆನ್ನೈ ಪಿಚ್ ಸಹ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡಲಿದ್ದು, ಮೊದಲ ಪಂದ್ಯದಲ್ಲಿ ಆಡಿದ ಪ್ಲೇಯಿಂಗ್ ಇಲೆವೆನ್ ಆಡಿಸುವ ಯೋಜನೆಯನ್ನು ಮ್ಯಾನೇಜ್ಮೆಂಟ್ ಮಾಡಿಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಮೂರು ವಿಕೆಟ್ ಪಡೆದು ಇತಿಹಾಸ ನಿರ್ಮಿಸುವ ಕನಸಿನಲ್ಲಿದ್ದಾರೆ.
ಪುಟಿದೇಳುವ ಕನಸಿನಲ್ಲಿ ಇಂಗ್ಲೆಂಡ್
ಮೊದಲ ಪಂದ್ಯವನ್ನು ಸೋತಿರುವ ಇಂಗ್ಲೆಂಡ್ ಎರಡನೇ ಟಿ20 ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ, ಟೀಮ್ ಇಂಡಿಯಾಗೆ ಶಾಕ್ ನೀಡಲು ಪ್ಲ್ಯಾನ್ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಮಂಕಾಗಿದ್ದ ಇಂಗ್ಲೆಂಡ್ ಬ್ಯಾಟಿಂಗ್ ಚೆನ್ನೈನಲ್ಲಿ ಅಬ್ಬರಿಸಿದಾಗ ಬೃಹತ್ ಮೊತ್ತದ ಕನಸು ಸಲೀಸಾಗುತ್ತದೆ. ಪ್ರವಾಸಿ ತಂಡದ ಬೌಲರ್‌ಗಳು ಸಹ ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಿ ಭಾರತದ ಬ್ಯಾಟರ್‌ಗಳನ್ನು ಕಾಡಬೇಕಿದೆ.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪಂದ್ಯ ಆರಂಭ: ಸಂಜೆ 7ಕ್ಕೆ, ಚೆನ್ನೈ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications