
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶನಿವಾರದಿಂದ ಆರಂಭವಾಗಲಿದೆ. ಈ ಪಂದ್ಯದ ವೀಕ್ಷಣೆಗೆ ಕ್ರೀಡಾಂಗಣದ ಸಾಮರ್ಥ್ಯದ ಅರ್ಧದಷ್ಟು ಪ್ರೇಕ್ಷಕರಿಗೆ ಅವಕಾಶವನ್ನು ನೀಡಲಾಗಿದೆ. ಹೀಗಾಗಿ ಸುದೀರ್ಘ ಕಾಲದ ಬಳಿಕ ಮತ್ತೆ ಪ್ರೇಕ್ಷಕರ ಸಮ್ಮುಖದಲ್ಲಿ ಭಾರತದಲ್ಲಿ ಪಂದ್ಯ ನಡೆಯಲಿದೆ.
ಕಳೆದ ಮಾರ್ಚ್‌ನಲ್ಲಿ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಕ್ರೀಡಾ ಚಟುವಟಿಕೆಗಳು ಸ್ಥಬ್ಧವಾಗಿತ್ತು. ಅದಾದ ಬಳಿಕ ಈಗ ಇದೇ ಮೊದಲ ಬಾರಿಗೆ ಭಾರತದಲ್ಲಿ ಕ್ರೀಡಾಕೂಟವೊಂದಕ್ಕೆ ಪ್ರೇಕ್ಷಕರಿಗೆ ಅವಕಾಶವನ್ನು ನೀಡಿದಂತಾಗಿದೆ. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳಲಾಗಿದೆ. ಇಂಗ್ಲೆಂಡ್ ತಂಡದ ಅನುಭವಿ ಆಟಗಾರ ಜೇಮ್ಸ್ ಆಂಡರ್ಸನ್ ಭಾರತದಲ್ಲಿ ಪ್ರೇಕ್ಷಕರ ಸಮ್ಮುಖದಲ್ಲಿ ಕ್ರಿಕೆಟ್ ಆಡಲು ಕಾತರಿಸುತ್ತಿರುವುದಾಗಿ ಹೇಳಿದ್ದಾರೆ.
ಪ್ರೇಕ್ಷಕರ ಸಮ್ಮುಖದಲ್ಲಿ ಕ್ರಿಕೆಟ್ ಆಡುವಾಗ ಚೆಂಡು ಪ್ರೇಕ್ಷಕರ ಗ್ಯಾಲರಿಗೆ ಬಿದ್ದ ಬಳಿಕ ಸ್ಯಾನಿಟೈಸೇಶನ್ ಮಾಡಿದ ಬಳಿಕವೇ ಆಟಗಾರರಿಗೆ ನೀಡುವ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಆಂಡರ್ಸನ್ ಮಾತನಾಡುತ್ತಾ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೂ ಈ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗಿತ್ತು. ಪ್ರತಿ ಬಾರಿ ಚೆಂಡು ಬೌಂಡರಿ ಗೆರೆ ದಾಟಿದ ಬಳಿಕವೂ ಚೆಂಡನ್ನು ಸ್ಯಾನಿಟೈಸ್ ಮಾಡಿ ಆಟಗಾರರಿಗೆ ನೀಡಲಾಗಿತ್ತು ಎಂದಿದ್ದಾರೆ.
ತಮಿಶಲುನಾಡು ಕ್ರಿಕೆಟ್ ಅಸೊಸಿಯೇಶನ್‌ನ ಅಧ್ಯಕ್ಷ ರಾಮಸ್ವಾಮಿ "ಪ್ರತಿ ಬಾರಿ ಚೆಂಡು ಬೌಂಡರಿ ಗೆರೆ ದಾಟಿದ ಬಳಿಕ ಆನ್‌ಫೀಲ್ಡ್ ಅಂಪಾಯರ್‌ಗಳಿಂದ ಸ್ಯಾನಿಟೈಸ್ ಮಾಡಲಾಗುತ್ತದೆ. ಮೊದಲ ಪಂದ್ಯದಲ್ಲೂ ಎಲ್ಲಾ ಸ್ಟ್ಯಾಂಡ್‌ಗಳಲ್ಲಿಯೂ ನಾವು ಸ್ವಯಂಸೇವಕರನ್ನು ನಿಲ್ಲಿಸಿದ್ದೆವು. ಚೆಂಡು ಬೌಂಡಿ ಗೆರೆ ದಾಟಿದ ನಂತರ ಮರಳಿಸಿದ ಬಳಿಕ ಸ್ಯಾನಿಟೈಸ್ ಮಾಡಲಾಗುತ್ತಿತ್ತು. ಅದನ್ನು ಎರಡನೇ ಪಂದ್ಯದಲ್ಲೂ ಮುಂದುವರಿಸಲಾಗುತ್ತದೆ ಎಂದಿದ್ದಾರೆ.
"ಎಲ್ಲಾ ಸ್ಟಾಂಡ್‌ಗಳಲ್ಲಿಯೂ ನಮ್ಮ ಸ್ವಂಸೇವಕರು ಇದ್ದು ಎಲ್ಲಾ ನೀತಿಸಂಹಿತೆಗಳನ್ನು ನಿರ್ವಹಿಸಲಾಗುತ್ತಿದೆಯೇ ಎಂಬುದನ್ನು ಗಮನಿಸುತ್ತಾರೆ. ಏನಾದರೂ ಸಮಸ್ಯೆಗಳಾದಲ್ಲಿ ನಮಗೆ ಮಾಹಿತಿಯನ್ನು ನೀಡಲಿದ್ದಾರೆ. ನಾವು ಆ ಬಗ್ಗೆ ಗಮನಹರಿಸಲಿದ್ದೇವೆ. ಇದರ ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಲು ಪ್ರತ್ಯೇಕ ಸಿಬ್ಬಂದಿಗಳು ಇರಲಿದ್ದು ಯಾವುದಾದರೂ ವಿಚಾರಗಳು ಅವರ ಗಮನಕ್ಕೆ ಬಂದಲ್ಲಿ ಆಯಾ ಸ್ಟ್ಯಾಂಡ್‌ನಲ್ಲಿರುವ ಸ್ವಯಂಸೇವಕರಿಗೆ ಮಾಹಿತಿ ನೀಡಲಿದ್ದಾರೆ" ಎಂದು ರಾಮಸ್ವಾಮಿ ಹೇಳಿದ್ದಾರೆ.