ಏಕದಿನ: ರೂಟ್, ಮಾರ್ಗನ್ ಜೊತೆಯಾಟ; ಭಾರತಕ್ಕೆ ಸೋಲಿನ ಪಾಠ!

ಲೀಡ್ಸ್, ಜುಲೈ 18: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಮಂಗಳವಾರ (ಜು. 17) ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಸೋಲುವ ಮೂಲಕ ಸರಣಿಯನ್ನು ಕೈಚೆಲ್ಲಿದೆ. ಈ ಪಂದ್ಯದಲ್ಲಿ ಭಾರತ ನೀಡಿದ್ದ 257 ಸಾಧಾರಣ ರನ್ ಗುರಿಯನ್ನು ಇಂಗ್ಲೆಂಡ್ 44.3 ಓವರ್ ಗಳಲ್ಲಿ 2 ವಿಕೆಟ್ ನಷ್ಟದೊಂದಿಗೆ ತಲುಪಿ (260 ರನ್) 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು. ಜೋ ರೂಟ್ ಮತ್ತು ಇಯಾನ್ ಮಾರ್ಗನ್ ಜೊತೆಯಾಟ ಇಂಗ್ಲೆಂಡ್ ಗೆಲುವನ್ನು ಬರೆಯಿತು.
ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ 50 ಓವರ್ ಗಳಿಗೆ 8 ವಿಕೆಟ್ ಕಳೆದು 256 ರನ್ ಪೇರಿಸಿ ಇಂಗ್ಲೆಂಡ್ ಗೆ 257 ರನ್ ಗುರಿ ನೀಡಿತ್ತು. ಶಾರ್ದೂಲ್ ಠಾಕೂರ್ 22 (13), ಭುವನೇಶ್ವರ್ ಕುಮಾರ್ 21 (35) ರನ್ ಗಳಿಸಿ ಅಂತಿಮ ಓವರ್ ಗಳಲ್ಲಿ ತಂಡಕ್ಕೆ ರನ್ ಬಲ ತುಂಬಿದ್ದರು.
ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 71 (72), ಶಿಖರ್ ಧವನ್ 44 (49), ಎಂಎಸ್ ಧೋನಿ 42 (66) ರನ್ ಸಿಡಿಸಿದ್ದು ಬಿಟ್ಟರೆ ಉಳಿದ ಹೆಚ್ಚಿನ ಬ್ಯಾಟ್ಸ್ಮನ್ ಗಳ ಗಮನಾರ್ಹ ಕೊಡುಗೆ ದೇಸಿ ತಂಡಕ್ಕೆ ದಕ್ಕದಾಯಿತು. ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಬೌಲರ್ ಗಳ ಬೆಂಬಲವೂ ಲಭಿಸದೆ 30 ಓವರ್ ಗಳ ಮುಕ್ತಾಯದ ವೇಳೆಗೆ ಭಾರತಕ್ಕೆ ಸೋಲಿನ ಸುಳಿವು ದೊರೆತಿತ್ತು.
ಇಂಗ್ಲೆಂಡ್ ಆಟಗಾರರ ಲೆಕ್ಕಾಚಾರದ ಆಟ ಇಲ್ಲಿ ಭಾರತಕ್ಕೆ ಎರವಾಯಿತು. ಆರಂಭಿಕರಾಗಿ ಇಳಿದ ಜೇಮ್ಸ್ ವಿನ್ಸ್ (27/27), ಜಾನಿ ಬೇರ್ಸ್ಟೋವ್ (30/13) ಬೇಗನೆ ನಿರ್ಗಮಿಸಿದ್ದು ಬಿಟ್ಟರೆ ಅನಂತರ ಬ್ಯಾಟಿಂಗ್ ಎತ್ತಿಕೊಂಡ ಜೋ ರೂಟ್ ಮತ್ತು ಇಯಾನ್ ಮಾರ್ಗನ್ ವಿಕೆಟ್ ಕಾವಲು ಕಾದರು.
ರೂಟ್ (100/120) ಮತ್ತು ಮಾರ್ಗನ್ (88/108) ಪಾರ್ಟ್ನರ್ ಶಿಪ್ ಭಾರತವನ್ನು ಸೋಲಿನಂಚಿಗೆ ತಳ್ಳಿತು. ಬ್ಯಾಟಿಂಗ್ ವೈಫಲ್ಯ, ಪ್ರಖರ ಬೌಲಿಂಗ್ ದಾಳಿಯಿಲ್ಲದೆ, ಬಿಗಿ ಫೀಲ್ಡಿಂಗ್ ಕೊರತೆ ಎಲ್ಲವೂ ಭಾರತದ ಸೋಲಿಗೆ ಕಾರಣವಾಯ್ತು. ಇಲ್ಲಿಗೆ ಟೀಮ್ ಇಂಡಿಯಾ ಎಲ್ಲೋ ಒಂದಿಷ್ಟು ತಿದ್ದಿಕೊಳ್ಳಬೇಕಿದೆ, ಇನ್ನಷ್ಟು ಗಟ್ಟಿಗೊಳ್ಳುವ ಅಗತ್ಯವಿದೆ ಎಂಬ ಪಾಠವನ್ನೂ ಈ ಸೋಲು ಕಲಿಸಿದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications