
ಸೌಥಾಂಪ್ಟನ್, ಆಗಸ್ಟ್ 31: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮತ್ತೊಂದು ಮಹತ್ವದ ಮೈಲುಗಲ್ಲು ಕ್ರಮಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 6,000 ರನ್ ಪೂರೈಸಿದ ಹತ್ತನೇ ಭಾರತೀಯ ಆಟಗಾರ ಎಂಬ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.
70ನೇ ಟೆಸ್ಟ್ ಆಡುತ್ತಿರುವ ಕೊಹ್ಲಿ, 119 ಇನ್ನಿಂಗ್ಸ್ ನಲ್ಲಿ 23 ಶತಕ ಮತ್ತು 18 ಅರ್ಧಶತಕಗಳೊಂದಿಗೆ 54.49ರ ಸರಾಸರಿಯಲ್ಲಿ ಈ ಸಾಧನೆ ಮಾಡಿದ್ದಾರೆ.
ಸುನಿಲ್ ಗವಾಸ್ಕರ್ ಬಳಿಕ ಭಾರತದ ಪರ ಅತಿ ವೇಗದ ಆರು ಸಾವಿರ ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಯೂ ಅವರು ಭಾಜನರಾಗಿದ್ದಾರೆ. ಗವಾಸ್ಕರ್ 117 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
ಸಚಿನ್ ತೆಂಡೂಲ್ಕರ್ 120, ವೀರೇಂದ್ರ ಸೆಹ್ವಾಗ್ 121 ಮತ್ತು ರಾಹುಲ್ ದ್ರಾವಿಡ್ 125 ಇನ್ನಿಂಗ್ಸ್‌ಗಳಲ್ಲಿ ಆರು ಸಾವಿರ ರನ್ ಗಡಿ ತಲುಪಿದ್ದರು.
ಅತಿ ವೇಗದಿಂದ ಆರು ಸಾವಿರ ರನ್ ಬಾರಿಸಿದ ದಾಖಲೆ ಡೊನಾಲ್ಡ್ ಬ್ರಾಡ್ಮನ್ (68 ಇನ್ನಿಂಗ್ಸ್) ಅವರ ಹೆಸರಿನಲ್ಲಿದೆ.
ಕೊಹ್ಲಿ ತಮ್ಮ ಕೊನೆಯ ಸಾವಿರ ರನ್‌ಗಳನ್ನು ಕೇವಲ 14 ಇನ್ನಿಂಗ್ಸ್‌ಗಳಲ್ಲಿ ಪೂರೈಸಿದ್ದಾರೆ.
ಕೊಹ್ಲಿ ಸಾವಿರ ರನ್ ಮೆಟ್ಟಿಲುಗಳು
* 1000 ರನ್ - 27 ಇನ್ನಿಂಗ್ಸ್
* 1000- 2000 ರನ್ - 26 ಇನ್ನಿಂಗ್ಸ್
* 2000- 3000 ರನ್ - 20 ಇನ್ನಿಂಗ್ಸ್
* 3000- 4000 ರನ್ - 16 ಇನ್ನಿಂಗ್ಸ್
* 4000- 5000 ರನ್ - 16 ಇನ್ನಿಂಗ್ಸ್
* 5000- 6000 ರನ್ - 14 ಇನ್ನಿಂಗ್ಸ್
