ಭಾರತ vs ಇಂಗ್ಲೆಂಡ್: ಭಾರತಕ್ಕೆ ಸರಣಿ ಗೆಲ್ಲಿಸಿಕೊಡಬಲ್ಲ ಆಟಗಾರನನ್ನು ಹೆಸರಿಸಿದ ಬ್ರಾಡ್ ಹಾಗ್

ನಾಟಿಂಗ್‌ಹ್ಯಾಮ್, ಆಗಸ್ಟ್ 3: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಬುಧವಾರದಿಂದ ಆರಂಭವಾಗಲಿದೆ. ಭಾರತ ಇಂಗ್ಲೆಂಡ್ ನೆಲದಲ್ಲಿನ ಸತತ ಸರಣಿ ಸೋಲಿನ ಸರಪಳಿಯನ್ನು ಮುರಿಯಲು ಈ ಸರಣಿಯಲ್ಲಿ ಪ್ರಯತ್ನಿಸಲಿದೆ. ಇದಕ್ಕೂ ಹಿಂದಿನ ಮೂರು ಟೆಸ್ಟ್ ಸರಣಿಯಲ್ಲಿಯೂ ಭಾರತ ಹೀನಾಯವಾಗಿ ಸೋಲು ಕಂಡಿತ್ತು. 2011ರಲ್ಲಿ 0-4 ಅಂತರದಿಂದ ಸರಣಿಯನ್ನು ಕಳೆದುಕೊಂಡಿದ್ದ ಭಾರತ, ನಂತರ 2014ರಲ್ಲಿ 1-3 ಅಂತರದಿಂದ ಸೋತಿತ್ತು. ಬಳಿಕ 2018ರಲ್ಲಿ 1-4 ಅಂತರದಿಂದ ಭಾರತ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ನೆಲದಲ್ಲಿ ಸೋಲು ಕಂಡಿತ್ತು.
ಆದರೆ ಭಾರತೀಯ ಕ್ರಿಕೆಟ್ ಇತ್ತೀಚೆಗೆ ಅತ್ಯದ್ಭುತವಾದ ಪ್ರದರ್ಶನ ನೀಡಿಕೊಂಡು ಬರುತ್ತಿರುವುದರಿಂದ ಇಂಗ್ಲೆಂಡ್‌ಗೆ ಅದರದ್ದೇ ನೆಲದಲ್ಲಿ ಸೋಲುಣಿಸಲು ಇದೊಂದು ಅತ್ಯುತ್ತಮ ಅವಕಾಶ ಎಂದು ಸಾಕಷ್ಟು ಕ್ರಿಕೆಟ್ ಪಂಡಿತರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೇ ಅಭಿಪ್ರಾಯವನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಬ್ರಾಡ್ ಹಾಗ್ ಕೂಡ ವ್ಯಕ್ತಪಡಿಸಿದ್ದಾರೆ.

ಉತ್ತಮ ಪ್ರಮಾಣದ ಅಭ್ಯಾಸ
ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡದ ವಿರುದ್ಧ ಸೋಲು ಕಂಡಿತ್ತು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸುದೀರ್ಘ ಟೆಸ್ಟ್ ಸರಣಿಗೆ ಭಾರತ ತಂಡ ಅತ್ಯುತ್ತಮವಾಗಿ ಸಿದ್ಧತೆಯನ್ನು ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯದ ಬಳಿಕ ಭಾರತ ತಂಡ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಂಡಿದ್ದು ಅಭ್ಯಾಸ ಪಂದ್ಯಗಳಲ್ಲಿಯೂ ಭಾಗಿಯಾಗಿದೆ. ಕೌಂಟಿ ಸೆಲೆಕ್ಟ್ ತಂಡದ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯ ಹಾಗೂ ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯವನ್ನು ಭಾರತ ಇಂಗ್ಲೆಂಡ್‌ನಲ್ಲಿ ಆಡಿದೆ. ಹೀಗಾಗಿ ಉತ್ತಮ ಸಿದ್ಧತೆಯನ್ನು ಮಾಡಿಕೊಂಡಿದೆ.

ಇಂಗ್ಲೆಂಡ್‌ನಲ್ಲಿ ಉತ್ತಮ ಸಮಯ ಕಳೆದ ಭಾರತ
"ಕೊನೆಯ ಬಾರಿ ಭಾರತ ಇಂಗ್ಲೆಂಡ್‌ಗೆ ಪ್ರವಾಸ ಮಾಡಿದ್ದಾರೆ 1-4 ಅಂತರದಿಂದ ಸರಣಿಯನ್ನು ಕಳೆದುಕೊಂಡಿದ್ದರು. ಆದರೆ ಇದು ಹೊಸ ಸರಣಿಯಾಗಿದೆ. ಈಗಾಗಲೇ ಅವರು ಇಲ್ಲಿ ಎರಡು ತಿಂಗಳು ಕಳೆದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾಗವಹಿಸಿದ್ದಾರೆ. ಸಾಕಷ್ಟು ಅಭ್ಯಾಸ ಪಂದ್ಯವನ್ನು ಆಡಿದ್ದಾರೆ. ಹೀಗಾಗಿ ಅವರಿಗೆ ಈಗ ಯಾವುದೇ ಸಮರ್ಥನೆಗಳು ದೊರೆಯುವುದಿಲ್ಲ. ವಿದೇಶಿ ಪರಿಸ್ಥಿತಿಗೆ ಅವರು ಹೊಂದಾಣಿಕೆ ಆಗಲೇ ಬೇಕಿದೆ" ಎಂದು ಬ್ರಾಡ್ ಹಾಗ್ ಯುಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೌಲಿಂಗ್ ವಿಭಾಗದ ಬಗ್ಗೆ ಭರವಸೆ ವ್ಯಕ್ತಪಡಿಸಿದ ಹಾಗ್
2008ರಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಬಳಿಕ ಮತ್ತೆ ಆ ಸಾಧನೆ ಪುನಾರಾವರ್ತಿಸಲು ಭಾರತ ತಂಡಕ್ಕೆ ಈ ಬಾರಿ ವೇಗದ ಬೌಲಿಂಗ್ ವಿಭಾಗ ನೆರವಾಗಲಿದೆ ಎಂಬ ವಿಶ್ವಾಸವನ್ನು ಹಾಗ್ ವ್ಯಕ್ತಪಡಿಸಿದರು. ವಿಶ್ವದರ್ಜೆಯ ನಾಲ್ವರು ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಯಾವ ಭಾಗದಲ್ಲಿಯಾದರೂ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಬಲ್ಲವರಾಗಿದ್ದಾರೆ. ಈ ವೇಗಿಗಳಲ್ಲಿ ಓರ್ವ ಗೇಮ್ ಚೇಂಚರ್ ಎನಿಸಬಲ್ಲ ಎಂದಿದ್ದಾರೆ ಬ್ರಾಡ್ ಹಾಗ್.

ಗೆಲುವು ತಂದುಕೊಂಡಬಲ್ಲ ವೇಗಿ ಮೊಹಮ್ಮದ್ ಶಮಿ
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಪಾಲಿಗೆ ಗೆಲುವನ್ನು ತಂದುಕೊಡಬಲ್ಲ ಆಟಗಾರ ಎಂದರೆ ಅದುವೇಗಿ ಮೊಹಮ್ಮದ್ ಶಮಿ ಎಂಬ ಅಭಿಪ್ರಾಯವನ್ನು ಹಾಗ್ ವ್ಯಕ್ತಪಡಿಸಿದರು. "ನೀವು ಶಮಿ ಅವರ ಬೌಲಿಂಗ್ ಗಮನಿಸಿದರೆ ಕಳೆದ ಬಾರಿ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದರು. ಎಡ್ಜ್ ಆಗಿ ವಿಕೆಟ್ ಪಡೆಯುವ ಅವಕಾಶದಲ್ಲಿ ಡ್ರಾಪ್ ಆಗುವ ಮೂಲಕ ವಿಕೆಟ್ ಕಳೆದುಕೊಂಡಿದ್ದರು. ಆದರೆ ಈ ಸರಣಿಯಲ್ಲಿ ಶಮಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಲಿದ್ದಾರೆ. ಭಾರತ ತಂಡವನ್ನು ಗೆಲ್ಲಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಆಟಗಾರ" ಎಂದು ಮೊಹಮ್ಮದ್ ಶಮಿ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications