
ನಾಟಿಂಗ್‌ಹ್ಯಾಮ್, ಆಗಸ್ಟ್ 8: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನೀರಸವಾಗಿ ಅಂತ್ಯಕಂಡಿದೆ. ಸಾಕಷ್ಟು ಕುತೂಹಲವನ್ನು ಮೂಡಿಸಿದ್ದ ಅಂತಿಮ ದಿನದಾಟದ ಆರಂಭಕ್ಕೆ ಮಳೆ ಸ್ವಲ್ಪವೂ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿದೆ. ಹೀಗಾಗಿ ಪಂದ್ಯದಲ್ಲಿ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡಿ ಗೆಲುವಿನ ಸನಿಹಕ್ಕೆ ಬಂದಿದ್ದ ಭಾರತ ತಂಡಕ್ಕೆ ಮಳೆ ನಿರಾಸೆ ಮೂಡಿಸಿದೆ.
ಅಂತಿಮ ದಿನದಾಟದಲ್ಲಿ ಭಾರತದ ಗೆಲುವಿಗೆ ಕೇವಲ 157 ರನ್‌ಗಳ ಅವಶ್ಯಕತೆಯಿತ್ತು. 9 ವಿಕೆಟ್‌ಗಳನ್ನು ಉಳಿಸಿಕೊಂಡಿದ್ದ ಭಾರತ ಪಂದ್ಯದಲ್ಲಿ ಗೆಲುವು ಸಾಧಿಸುವತ್ತ ದಾಪುಗಾಲಿಟ್ಟಿತ್ತು. ಆದರೆ ಅಂತಿಮ ದಿನ ಮಳೆ ಪಂದ್ಯಕ್ಕೆ ಸ್ಲಲ್ಪವೂ ಅವಕಾಶವನ್ನು ಮಾಡಿಕೊಡಲಿಲ್ಲ. ಹೀಗಾಗಿ ಅಂತಿಮ ದಿನ ಒಂದು ಎಸೆತ ಕಾಣದೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿದೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸರ್ವಾಂಗೀಣ ಪ್ರದರ್ಶನ ನೀಡಲು ಯಶಸ್ವಿಯಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 183 ರನ್‌ಗಳಿಗೆ ಮುನ್ನವೇ ಆಲೌಟ್ ಮಾಡಲು ಭಾರತ ಯಶಸ್ವಿಯಾಗಿತ್ತು. ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಬೌಲಿಂಗ್ ದಾಳಿಯಲ್ಲಿ ಇಂಗ್ಲೆಂಡ್ ತಂಡಕ್ಕೆ ಕಠಿಣ ಸವಾಲೊಡ್ಡಿತ್ತು. ನಾಯಕ ಜೋ ರೂಟ್ ಹೊರತು ಪಡಿಸಿದರೆ ಉಳಿದ ಎಲ್ಲಾ ಆಟಗಾರರು ಕೂಡ ಭಾರತೀಯ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ಶರಣಾಗಿದ್ದರು.
ಆದರೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮಾತ್ರ ಭಾರತೀಯ ಬೌಲರ್‌ಗಳ ಬೆವರಿಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಅದ್ಭುತ ಬ್ಯಾಟಿಂಗ್‌ನ ಸಹಾಯದಿಂದಾಗಿ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 303 ರನ್‌ಗಳಿಸಲು ಶಕ್ತವಾಯಿತು. ಈ ಮೂಲಕ ಭಾರತ ತಂಡಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ 209 ರನ್‌ಗಳ ಗುರಿಯನ್ನು ನಿಗದಿಪಡಿಸಿದೆ.
ಇನ್ನು ದ್ವಿತೀಯ ಇನ್ನಿಂಗ್ಸ್‌ನಲ್ಲಿ 209 ರನ್‌ಗಳ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಭಾರತೀಯ ತಂಡ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತವನ್ನು ಅನುಭವಿಸಿತು. ತಂಡ 34 ರನ್‌ಗಳನ್ನು ಗಳಿಸಿದ್ದ ವೇಳೆ ರಾಹುಲ್ 26 ರನ್‌ಗಳನ್ನು ಬಾರಿಸಿ ಸ್ಟುವರ್ಟ್ ಬ್ರಾಡ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತೀಯ ತಂಡದ ಹೈಯೆಸ್ಟ್ ಸ್ಕೋರರ್ ಎನಿಸಿದ್ದರು ರಾಹುಲ್. ಸುದೀರ್ಘ ಕಾಲದ ಬಳಿಕ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಗಳಿಸಿದ್ದ ರಾಹುಲ್ ಮೊದಲ ಇನ್ನಿಂಗ್ಸ್‌ನಲ್ಲಿ 84 ರನ್‌ಗಳ ಕೊಡುಗೆ ನೀಡಿದ್ದರು.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದೆ. ವೇಗದ ಬೌಲಿಂಗ್‌ಗೆ ಸಹಕಾರಿಯಾಗುವಂತಾ ಪಿಚ್‌ನಲ್ಲಿ ಭಾರತೀಯ ವೇಗಿಗಳು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ಆತಿಥೇಯ ತಂಡಕ್ಕೇ ಆಘಾತವನ್ನು ನೀಡುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 183 ರನ್‌ಗಳಿಗೆ ಆಲೌಟ್ ಮಾಡಿದ್ದ ಭಾರತೀಯ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ 303 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತ್ತು.
ಇನ್ನು ಈ ಸೆಣೆಸಾಟದಲ್ಲಿ ಭಾರತೀಯ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ತಮ್ಮ ಹಳೆಯ ಮೊನಚನ್ನು ಕಂಡುಕೊಳ್ಳಲು ಸಾಧ್ಯವಾಗಿರುವುದು ಭಾರತದ ಪಾಲಿಗೆ ಖುಷಿಯ ಸಂಗತಿಯಾಗಿದೆ. ಟೀಮ್ ಇಂಡಿಯಾದ ವೇಗಿ ಬೂಮ್ರಾ ಇಂಗ್ಲೆಂಡ್ ವಿರುದ್ಧದ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 9 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿದ್ದ ಬೂಮ್ರಾ ಎರಡನೇ ಇನ್‌ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಶಮಿ, ಸಿರಾಜ್ ಠಾಕೂರ್ ಕೂಡ ಬೌಲಿಂಗ್‌ನಲ್ಲಿ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ.