
ಚೆನ್ನೈ: ಫಿಟ್ ಆಗಿರುವ ಬೌಲಿಂಗ್ ಆಲ್ ರೌಂಡರ್ ಅಕ್ಸರ್ ಪಟೇಲ್ ಮುಂಬರಲಿರುವ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ಗಾಗಿ ಸಿದ್ಧವಾಗುತ್ತಿದ್ದಂತಿದೆ. ಗುರುವಾರ (ಫೆಬ್ರವರಿ 11) ಪಟೇಲ್ ನೆಟ್‌ನಲ್ಲಿ ಬೆವರಿಳಿಸಿದ್ದಾರೆ. ಪಟೇಲ್ ಅವರು ನಾಯಕ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿದೆ.
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್‌ನಲ್ಲಿ ಅಕ್ಸರ್ ಪಟೇಲ್ ಭಾರತದ ಪರ ಟೆಸ್ಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಪಟೇಲ್ ಟೀಮ್ ಇಂಡಿಯಾದ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಂಡರೆ ಕುಲದೀಪ್ ಯಾದವ್‌ಗೆ ಅವಕಾಶದ ಸಾಧ್ಯತೆ ಕಡಿಮೆಯಾಗಲಿದೆ.
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಹಂಚಿಕೊಂಡಿರುವ ವಿಡಿಯೋದಲ್ಲಿ ಆರಂಭದಲ್ಲಿ ಕೊಹ್ಲಿಗೆ ಬೌಲಿಂಗ್ ಮಾಡುವ ಅಕ್ಸರ್ ಆ ಬಳಿಕ ನೆಟ್ ಬೌಲರ್ ಅಂಕಿತ್ ರಜಪೂತ್‌ಗೆ ಬ್ಯಾಟಿಂಗ್ ಮಾಡುವ ಚಿತ್ರಣವಿದೆ. 'ನೋಡಿ, ನೆಟ್‌ಗೆ ಯಾರು ವಾಪಸ್ಸಾಗಿದ್ದಾರೆ,' ಎಂದು ಬಿಸಿಸಿಐ ಟ್ವೀಟ್‌ನಲ್ಲಿ ಬರೆದುಕೊಂಡಿದೆ.
ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಶನಿವಾರದಿಂದ (ಫೆಬ್ರವರಿ 13) ಆರಂಭಗೊಳ್ಳಲಿದೆ. ಪಂದ್ಯ 9:30 AMಗೆ ಆರಂಭಗೊಳ್ಳಲಿದೆ. ಪಟೇಲ್ 38 ಏಕದಿನ ಪಂದ್ಯಗಳಲ್ಲಿ 181 ರನ್, 45 ವಿಕೆಟ್, 11 ಟಿ20ಐ ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ. 97 ಐಪಿಎಲ್ ಪಂದ್ಯಗಳಲ್ಲಿ 80 ವಿಕೆಟ್ ಪಡೆದಿದ್ದಾರೆ.