
ಲಂಡನ್, ಆಗಸ್ಟ್ 07: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಪ್ರಮುಖ ವೇಗಿ ಜಸ್ ಪ್ರೀತ್ ಬೂಮ್ರಾ ಅವರು ಲಭ್ಯರಾಗುವ ಬಗ್ಗೆ ಇದ್ದ ಅನುಮಾನ ನಿಜವಾಗಿದೆ. ಬೂಮ್ರಾ ಅವರು ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಬೌಲಿಂಗ್ ಕೋಚ್ ಭರತ್ ಅರುಣ್ ಅವರು ಹೇಳಿದ್ದಾರೆ.
ಆಗಸ್ಟ್ 9 ರಿಂದ 13ರ ತನಕ ನಡೆಯಲಿರುವ ಲಾರ್ಡ್ಸ್ ಪಂದ್ಯಕ್ಕೆ 24 ವರ್ಷ ವಯಸ್ಸಿನ ಯಾರ್ಕರ್ ತಜ್ಞ, ಬಲಗೈ ಬೌಲರ್ ಜಸ್ ಪ್ರೀತ್ ಬೂಮ್ರಾ ಅವರು ಗಾಯದಿಂದ ಗುಣಮುಖರಾದರೂ,ಮೈದಾನಕ್ಕೆ ತಕ್ಷಣವೇ ಇಳಿಸುವಂತಿಲ್ಲ.ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡುತ್ತಿಲ್ಲ ಎಂದು ಅರುಣ್ ಅವರು ಸುದ್ದಿಗಾರರಿಗೆ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂಕೂಡಾ ಭಾರತದ ಪ್ರಮುಖ ವೇಗಿ ಜಸ್ ಪ್ರೀತ್ ಬೂಮ್ರಾ ಅವರು ಅಲಭ್ಯರಾಗುವ ಸಾಧ್ಯತೆ ಕಂಡು ಬಂದಿದೆ.
ಭುಜದ ಸಮಸ್ಯೆಯಿಂದ ಬಲಲುತ್ತಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಮ್ಯಾಂಚೆಸ್ಟರ್ ನಲ್ಲಿ ಸರ್ಜರಿಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಸರಣಿಯಿಂದ ಹೊರಗುಳಿಯಬೇಕಾಗುತ್ತದೆ.
ಐರ್ಲೆಂಡ್ ವಿರುದ್ಧದ ಜೂನ್ 07ರ ಪಂದ್ಯದಲ್ಲಿ ಹೆಬ್ಬೆರಳು ಗಾಯ ಮಾಡಿಕೊಂಡಿದ್ದ ಬೂಮ್ರಾ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಆಡಿರಲಿಲ್ಲ. ಬರ್ಮಿಂಗ್ ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವ ವಿರಾಟ್ ಕೊಹ್ಲಿ ಪಡೆ ಈಗ ಲಾರ್ಡ್ಸ್ ಅಂಗಳದಲ್ಲಿ ಗೆಲುವು ಸಾಧಿಸಲು ಸಜ್ಜಾಗುತ್ತಿದೆ.