
ಚೆನ್ನೈ: ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. ಮೊಣಕೈ ಗಾಯಕ್ಕೀಡಾಗಿರುವ ಆರ್ಚರ್ ಮುಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಪಂದ್ಯ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಫೆಬ್ರವರಿ 13ರಿಂದ ಆರಂಭಗೊಳ್ಳಲಿದೆ.
ಶನಿವಾರ ಆರಂಭಗೊಳ್ಳಲಿರುವ ದ್ವಿತೀಯ ಟೆಸ್ಟ್‌ನಲ್ಲಿ ಜೋಫ್ರಾ ಆರ್ಚರ್ ಆಡುತ್ತಿಲ್ಲ ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಗುರುವಾರ (ಫೆಬ್ರವರಿ 11) ಘೋಷಿಸಿದೆ. 25ರ ಹರೆಯದ ಆರ್ಚರ್ ಆರಂಭಿಕ ಟೆಸ್ಟ್ ವೇಳೆಯೂ ಅಸ್ವಸ್ಥರಿದ್ದಂತೆ ಕಾಣಿಸಿತ್ತು.
ಚೆನ್ನೈ ಸ್ಟೇಡಿಯಂನಲ್ಲೇ ನಡೆದಿದ್ದ ಮೊದಲನೇ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜೋಫ್ರಾ ಕೇವಲ 9 ಓವರ್ ಎಸೆದಿದ್ದರು. ತನ್ನ ಬಲ ಮೊಣಕೈಗೆ ಸೂಜಿ ತೆಗೆದುಕೊಂಡಿದ್ದರಿಂದ ಆರ್ಚರ್ ಮಂಕಾದಂತೆ ಕಾಣುತ್ತಿದ್ದಾರೆ ಎಂದು ಇಸಿಬಿ ತಿಳಿಸಿತ್ತು.
'ಈ ಸಮಸ್ಯೆ ಹಿಂದಿನ ಗಾಯದ ಸಮಸ್ಯೆಗೆ ಸಂಬಂಧಿಸಿದಂತೆ ಕಾಣಿಸುತ್ತಿಲ್ಲ. ಹೀಗಾಗಿ ಇಲ್ಲಿನ ಪರಿಸ್ಥಿತಿ ಗಾಯ ಬೇಗ ಗುಣ ಆಗಲು ನೆರವಾಗಲಿದೆ. ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ವೇಳೆ ಆರ್ಚರ್ ಮೈದಾನಕ್ಕಿಳಿಯಲಿದ್ದಾರೆ ಎಂದು ನಂಬಿದ್ದೇವೆ,' ಎಂದು ಇಸಿಬಿ ಹೇಳಿದೆ.