ಭಾರತ vs ಇಂಗ್ಲೆಂಡ್: ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾಗೆ ಆಪತ್ಬಾಂಧವನಾದ ಕನ್ನಡಿಗ ಕೆಎಲ್ ರಾಹುಲ್

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಬುಧವಾರ ಆಗಸ್ಟ್ 4ರಂದು ಇಂಗ್ಲೆಂಡ್‌ನ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಆರಂಭವಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಭಾರತದ ಬೌಲರ್‌ಗಳ ದಾಳಿಗೆ ಅಕ್ಷರಶಃ ತತ್ತರಿಸಿ ಹೋಯಿತು. ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ 64 ರನ್ ಗಳಿಸಿದ್ದು ಬಿಟ್ಟರೆ ಇಂಗ್ಲೆಂಡ್ ತಂಡದ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳೂ ಕೂಡ 30ರ ಗಡಿ ದಾಟುವ ಪ್ರಯತ್ನವನ್ನು ಮಾಡಲೇ ಇಲ್ಲ.
ಹೀಗೆ ಭಾರತೀಯ ಬೌಲರ್‌ಗಳ ದಾಳಿಗೆ ಮಂಕಾದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 183 ರನ್‌ಗಳಿಗೆ ಆಲ್ಔಟ್ ಆಯಿತು. ನಂತರ ಮೊದಲನೇ ಇನ್ನಿಂಗ್ಸ್‌ನಲ್ಲಿ ತನ್ನ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕನ್ನಡಿಗ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿದರು. ಮೊದಲ ದಿನದಾಟದಂತ್ಯಕ್ಕೆ 21 ರನ್ ಗಳಿಸಿದ್ದ ಟೀಮ್ ಇಂಡಿಯಾ ಯಾವುದೇ ವಿಕೆಟ್ ಕಳೆದುಕೊಳ್ಳಲಿಲ್ಲ.
ನಂತರ ಎರಡನೇ ದಿನದಾಟವನ್ನು ಆರಂಭಿಸಿದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಜವಾಬ್ದಾರಿಯುತ ಆಟವಾಡಿದರು. ರೋಹಿತ್ ಶರ್ಮಾ 36 ರನ್ ಗಳಿಸಿದ್ದಾಗ ಓಲ್ಲಿ ರಾಬಿನ್ಸನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ನಂತರ ಬಂದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕೇವಲ 4 ರನ್ ಗಳಿಸಿ ಜೇಮ್ಸ್ ಆ್ಯಂಡರ್ಸನ್ ಎಸೆತದಲ್ಲಿ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು, ಚೇತೇಶ್ವರ್ ಪೂಜಾರ ಔಟ್ ಆದ ಬೆನ್ನಲ್ಲೇ ಬಂದ ವಿರಾಟ್ ಕೊಹ್ಲಿ ನೆಲಕಚ್ಚಿ ನಿಂತು ನಾಯಕನ ಆಟವನ್ನಾಡಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಮಾತ್ರ ಜೇಮ್ಸ್ ಆ್ಯಂಡರ್ಸನ್ ಮೊದಲ ಎಸೆತದಲ್ಲಿಯೇ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡುವ ಮೂಲಕ ಗೋಲ್ಡನ್ ಡಕ್ಔಟ್ ಆಗಿ ಬಿಟ್ಟರು. ಅಷ್ಟು ಮಾತ್ರವಲ್ಲದೆ ಅಜಿಂಕ್ಯ ರಹಾನೆ ಕೂಡ 5 ರನ್ ಗಳಿಸಿದ್ದಾಗ ರನ್ಔಟ್ ಆಗುವುದರ ಮೂಲಕ ಪೆವಿಲಿಯನ್ ಸೇರಿಕೊಂಡರು.
ಹೀಗೆ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಸಾಲುಸಾಲಾಗಿ ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೆ ಅತ್ತ ಕೆಎಲ್ ರಾಹುಲ್ ಮಾತ್ರ ವಿಕೆಟ್ ಒಪ್ಪಿಸದೆ ಏಕಾಂಗಿ ಹೋರಾಟ ನಡೆಸಿದ್ದಾರೆ. ಆರಂಭದಿಂದಲೂ ಜಾಗರೂಕತೆಯ ಬ್ಯಾಟಿಂಗ್ ಮಾಡುತ್ತಿರುವ ಕೆಎಲ್ ರಾಹುಲ್ ಸದ್ಯ ಟೀಮ್ ಇಂಡಿಯಾದ ಗೋಡೆಯಾಗಿ ನಿಂತಿದ್ದಾರೆ. ಎರಡನೇ ದಿನದಾಟದಂತ್ಯಕ್ಕೆ 151 ಎಸೆತಗಳನ್ನು ಎದುರಿಸಿ 57 ರನ್ ಬಾರಿಸಿರುವ ಕೆಎಲ್ ರಾಹುಲ್ ಮೊದಲನೇ ಇನ್ನಿಂಗ್ಸ್‌ನಲ್ಲಿ ಸಂಕಷ್ಟದಲ್ಲಿದ್ದ ಭಾರತಕ್ಕೆ ಆಪತ್ಬಾಂಧವನಾಗಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಕೆಎಲ್ ರಾಹುಲ್‌ಗೆ ಆಡುವ ಅವಕಾಶವನ್ನು ನೀಡಿರಲಿಲ್ಲ. ಸದ್ಯ ಕೆಎಲ್ ರಾಹುಲ್ ನೀಡುತ್ತಿರುವ ಪ್ರದರ್ಶನವನ್ನು ನೋಡಿದ ಕ್ರೀಡಾಭಿಮಾನಿಗಳು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಕೆಎಲ್ ರಾಹುಲ್‌ಗೆ ಅವಕಾಶ ನೀಡಬೇಕಿತ್ತು, ಅಂದು ಕೆಎಲ್ ರಾಹುಲ್ ಇದ್ದಿದ್ದರೆ ನ್ಯೂಜಿಲೆಂಡ್ ವಿರುದ್ಧ ಉತ್ತಮ ಆಟವನ್ನು ಆಡುತ್ತಿದ್ದರು ಎಂದು ಕೆಎಲ್ ರಾಹುಲ್ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications