ಟ್ರೆಂಟ್ ಬ್ರಿಡ್ಜ್ ಮೂರನೇ ಟೆಸ್ಟ್: ಇಂಗ್ಲೆಂಡ್‌ಗೆ 521 ರನ್ ಗುರಿ ನೀಡಿದ ಭಾರತ

ನ್ಯಾಟಿಂಗ್‌ಹ್ಯಾಮ್, ಆಗಸ್ಟ್ 20: ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಭಾರತ 521 ರನ್‌ಗಳ ಬೃಹತ್ ಗುರಿ ನೀಡಿದೆ.
ದೊಡ್ಡ ಮೊತ್ತವನ್ನು ಬೆನ್ನಟ್ಟಿರುವ ಆಂಗ್ಲರ ಪಡೆ ಮೂರನೇ ದಿನದಾಂತ್ಯಂತಕ್ಕೆ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿದೆ. ಅಲೆಸ್ಟರ್ ಕುಕ್ (9) ಮತ್ತು ಕೀಟನ್ ಜೆನ್ನಿಂಗ್ಸ್ (13) ಆಡುತ್ತಿದ್ದಾರೆ.
ದಿನದ ಕೊನೆಯಲ್ಲಿ ವಿಕೆಟ್ ತೆಗೆಯಲು ಭಾರತ ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. 9 ಓವರ್‌ಗಳನ್ನು ಇಂಗ್ಲೆಂಡ್ ಆರಂಭಿಕ ಆಟಗಾರರು ಎಚ್ಚರಿಕೆಯಿಂದ ಆಡಿದರು.
ಇಂಗ್ಲೆಂಡ್ ಗೆಲ್ಲಲು 498 ರನ್ ಗಳಿಸಬೇಕಾಗಿದ್ದು, ಇನ್ನೂ ಎರಡು ದಿನಗಳ ಆಟ ಬಾಕಿ ಇದೆ.
ಇದಕ್ಕೂ ಮೊದಲು ಮೂರನೇ ದಿನದಾಟ ಆರಂಭಿಸಿದ ಭಾರತ, ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕ ಹಾಗೂ ಚೇತೇಶ್ವರ ಪೂಜಾರ ಮತ್ತು ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕದ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತು. 7 ವಿಕೆಟ್ ಕಳೆದುಕೊಂಡು 352 ರನ್ ಗಳಿಸಿದ್ದಾಗ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಈ ವೇಳೆಗೆ ಭಾರತ ಒಟ್ಟು 520 ರನ್ ಮುನ್ನಡೆ ಗಳಿಸಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಕೇವಲ ಮೂರು ರನ್‌ಗಳಿಂದ ಶತಕ ತಪ್ಪಿಸಿಕೊಂಡಿದ್ದರು. ಆದರೆ, ಎರಡನೆಯ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಲು ಇಂಗ್ಲೆಂಡ್ ಫೀಲ್ಡರ್ ಜೆನ್ನಿಂಗ್ಸ್ ನೆರವಾದರು. 93 ರನ್ ಗಳಿಸಿದ್ದ ಕೊಹ್ಲಿ, ಆಂಡರ್ಸನ್ ಬೌಲಿಂಗ್‌ನಲ್ಲಿ ನೀಡಿದ ಸುಲಭದ ಕ್ಯಾಚ್‌ಅನ್ನು ಗಲ್ಲಿಯಲ್ಲಿದ್ದ ಜೆನ್ನಿಂಗ್ಸ್ ಕೈಚೆಲ್ಲಿದರು.
ಮುಂದಿನ ಓವರ್‌ನಲ್ಲಿ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿದ ಕೊಹ್ಲಿ, ಟೆಸ್ಟ್‌ನಲ್ಲಿ ತಮ್ಮ 23ನೇ ಶತಕ ದಾಖಲಿಸಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಪತ್ನಿ ಅನುಷ್ಕಾ ಶರ್ಮಾರತ್ತ ಗಾಳಿಯಲ್ಲಿ ಮುತ್ತು ತೇಲಿಸಿ ಸಂಭ್ರಮಿಸಿದರು.
ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. 103 ರನ್ ಗಳಿಸಿದ್ದ ಕೊಹ್ಲಿಯನ್ನು ವೋಕ್ಸ್ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು.
ಭೋಜನ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿದ್ದ ಭಾರತ, ಬಳಿಕವೂ ಎಚ್ಚರಿಕೆಯ ಆಟ ಮುಂದುವರಿಸಿತು. ಪೂಜಾರ ಮತ್ತು ಕೊಹ್ಲಿ ಮೂರನೇ ವಿಕೆಟ್‌ಗೆ 113 ರನ್ ಸೇರಿಸಿದರು.
72 ರನ್ ಗಳಿಸಿದ್ದ ಚೇತೇಶ್ವರ ಪೂಜಾರ, ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿದ್ದ ಅಲೆಸ್ಟರ್ ಕುಕ್‌ಗೆ ಕ್ಯಾಚ್ ನೀಡಿದರು.
ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ರಿಷಬ್ ಪಂತ್ ಕೇವಲ ಒಂದು ರನ್ ಗಳಿಸಿ ಔಟಾದರು. ಒಂದೆಡೆ ರಹಾನೆ ನಿಧಾನಗತಿಯ ಆಟಕ್ಕೆ ಮೊರೆ ಹೋದರೆ, ಹಾರ್ದಿಕ್ ಪಾಂಡ್ಯ ವೇಗದ ಬ್ಯಾಟಿಂಗ್‌ಗೆ ಮುಂದಾದರು. ರಹಾನೆ (29) ಔಟ್ ಆದ ಬಳಿಕ ಬಂದ ಮಹಮ್ಮದ್ ಶಮಿ ಕೂಡ ಸಿಕ್ಸರ್ ಎತ್ತುವ ಪ್ರಯತ್ನದಲ್ಲಿ ಬೌಂಡರಿ ಗೆರೆ ಬಳಿ ಕ್ಯಾಚಿತ್ತು ಪೆವಿಲಿಯನ್‌ಗೆ ಮರಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications