ಭಾರತ-ಇಂಗ್ಲೆಂಡ್ ಟೆಸ್ಟ್: ಒಂದು ವಿಕೆಟ್‌ಗಾಗಿ ಒಂದು ದಿನ ಕಾಯಬೇಕು

ನ್ಯಾಟಿಂಗ್‌ಹ್ಯಾಮ್, ಆಗಸ್ಟ್ 21: ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು ಸಾಧಿಸಲು ಕೇವಲ ಒಂದು ವಿಕೆಟ್ ಅಗತ್ಯವಿದ್ದು, ಅದಕ್ಕಾಗಿ ಒಂದು ದಿನ ಕಾಯಬೇಕಾಗಿದೆ.
ನಾಲ್ಕನೆಯ ದಿನದ ಅಂತ್ಯಕ್ಕೆ ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿದ್ದು, ಭಾರತದ ಗೆಲುವಿಗೆ ಒಂದು ವಿಕೆಟ್ ಮಾತ್ರ ಬೇಕಾಗಿದೆ. ಇಂಗ್ಲೆಂಡ್‌ಗೆ ಗೆಲ್ಲಲು 210 ರನ್ ಅಗತ್ಯವಿದೆ. ಭಾರತದ ಪರ ಬೂಮ್ರಾ 85 ರನ್ ನೀಡಿ 5 ವಿಕೆಟ್ ಪಡೆದರು.
ಕೊನೆಯ ವಿಕೆಟ್‌ಗೆ ಆದಿಲ್ ರಶೀದ್ ಜತೆಗೂಡಿದ ಜೇಮ್ಸ್ ಆಂಡರ್ಸನ್ ಭಾರತವನ್ನು ಸತಾಯಿಸಿದರು. ಕೊಹ್ಲಿ ಎಷ್ಟೇ ಪ್ರಯತ್ನ ಪಟ್ಟರೂ ದಿನದ ಅಂತ್ಯದೊಳಗೆ ಅಂತಿಮ ವಿಕೆಟ್ ಕೀಳುವುದು ಸಾಧ್ಯವಾಗಲಿಲ್ಲ.
ಭಾರತದ ಗೆಲುವಿಗೆ ಅಡ್ಡಿಯಾಗಿದ್ದ ಆತಂಕವನ್ನು ವೇಗಿ ಜಸ್ ಪ್ರೀತ್ ಬೂಮ್ರಾ ನಿವಾರಿಸಿದರು. ಹೊಸ ಚೆಂಡು ಕೈಗೆ ತೆಗೆದುಕೊಂಡ ಬೂಮ್ರಾ, ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ನತ್ತ ಮರಳಿಸುವ ಕೆಲಸ ಆರಂಭಿಸಿದರು.
ಮೊದಲ ಅವಧಿಯಲ್ಲಿ ಆಕ್ರಮಣಕಾರಿ ಬೌಲಿಂಗ್ ನಡೆಸಿದ ಭಾರತಕ್ಕೆ ಇಂಗ್ಲೆಂಡ್ ಸುಲಭದ ತುತ್ತಾಗಲಿದೆ ಎಂದು ಭಾವಿಸಲಾಗಿತ್ತು. ಊಟದ ವಿರಾಮದ ವೇಳೆಗೆ ಇಂಗ್ಲೆಂಡ್ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆದರೆ, ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಭಾರತದ ಬೌಲರ್‌ಗಳನ್ನು ವಿಪರೀತ ಕಾಡಿದರು.
ಇಬ್ಬರೂ ಶತಕದ ಜತೆಯಾಟ ನೀಡಿದ್ದಲ್ಲದೆ, ಬಟ್ಲರ್ ವೈಯಕ್ತಿಕವಾಗಿ ಟೆಸ್ಟ್‌ನಲ್ಲಿ ತಮ್ಮ ಮೊದಲ ಶತಕ ಬಾರಿಸಿದರು. ಈ ಜೋಡಿ ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸುವ ಸೂಚನೆ ನೀಡಿತ್ತು.
ಬಟ್ಲರ್ ಮತ್ತು ಸ್ಟೋಕ್ಸ್ ಸರಾಗವಾಗಿ ರನ್ ಕಲೆಹಾಕತೊಡಗಿದರು. ಇಬ್ಬರೂ ಐದನೇ ವಿಕೆಟ್‌ಗೆ 169 ರನ್ ಸೇರಿಸಿದರು. 80 ಓವರ್ ಮುಗಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಹೊಸ ಚೆಂಡು ತೆಗೆದುಕೊಂಡಿದ್ದು ದೊಡ್ಡ ತಿರುವು ನೀಡಿತು.
ಬೂಮ್ರಾ, ಉತ್ತಮವಾಗಿ ಆಡುತ್ತಿದ್ದ ಬಟ್ಲರ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರೆ, ನಂತರದ ಎಸೆತದಲ್ಲಿಯೇ ಜಾನಿ ಬೈರ್‌ಸ್ಟೋ ವಿಕೆಟ್ ಎಗರಿಸಿದರು. ಅವರ ಹ್ಯಾಟ್ರಿಕ್ ಕನಸನ್ನು ಕ್ರಿಸ್ ವೋಕ್ಸ್ ಕಮರಿಸಿದರೂ, ತಮ್ಮ ಮುಂದಿನ ಓವರ್‌ನಲ್ಲಿ ಅವರನ್ನು ವಿಕೆಟ್ ಕೀಪರ್ ಪಂತ್‌ಗೆ ಕ್ಯಾಚ್ ನೀಡುವಂತೆ ಪ್ರೇರೇಪಿಸಿದರು.
ಇನ್ನೊಂದೆಡೆ ಎಚ್ಚರಿಕೆಯ ಆಟವಾಡುತ್ತಿದ್ದ ಬೆನ್ ಸ್ಟೋಕ್ಸ್, ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿದ್ದ ಕೆ.ಎಲ್. ರಾಹುಲ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು.
ಬೂಮ್ರಾ ಬೌಲಿಂಗ್‌ನಲ್ಲಿ ಆದಿಲ್ ರಶೀದ್ ಜೀವದಾನ ಪಡೆದರು. ಸ್ಲಿಪ್‌ನಲ್ಲಿದ್ದ ಕೊಹ್ಲಿಗೆ ರಶೀದ್ ಕ್ಯಾಚಿತ್ತರು. ಆದರೆ, ಬೂಮ್ರಾ ಗೆರೆಯಿಂದ ಹೊರಕ್ಕೆ ಕಾಲಿಟ್ಟಿದ್ದರಿಂದ ಅದು ನೋಬಾಲ್ ಆಗಿತ್ತು. ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಆದಿಲ್ ರಶೀದ್ ಸಿಕ್ಸರ್ ಬೌಂಡರಿಗಳನ್ನು ಬಾರಿಸಿ ಕಾಡಿದರು. ಶಮಿ ಬೌಲಿಂಗ್‌ನಲ್ಲಿ ಕೊಹ್ಲಿ ಕೂಡ ಅವರಿಗೆ ಜೀವದಾನ ನೀಡಿದರು.
ಸ್ಟುವರ್ಟ್ ಬ್ರಾಡ್ ಮತ್ತು ಆದಿಲ್ ರಶೀದ್ ಒಂಬತ್ತನೇ ವಿಕೆಟ್‌ಗೆ 50 ರನ್ ಸೇರಿಸಿದರು. 20 ರನ್ ಗಳಿಸಿದ್ದ ಬ್ರಾಡ್ ಕೊನೆಗೂ ರಾಹುಲ್‌ಗೆ ಕ್ಯಾಚ್ ನೀಡಿ ಔಟಾದಾಗ ಭಾರತದ ಪಾಳೆಯದಲ್ಲಿ ನಿಟ್ಟುಸಿರು ಮೂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications