
ಚೆನ್ನೈ: ಭಾರತದ ವಿರುದ್ಧದ ಮೊದಲನೇ ಟೆಸ್ಟ್‌ನಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ನಾಯಕ ಜೋ ರೂಟ್ ದ್ವಿಶತಕ ಬಾರಿಸಿದ್ದಾರೆ. ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅರ್ಧ ಶತಕ ಬಾರಿಸಿದ್ದಾರೆ. ಆರಂಭಿಕ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 550+ ರನ್ ಕಲೆ ಹಾಕಿದೆ.
ಐದನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಬೆನ್ ಸ್ಟೋಕ್ಸ್ ಟೆಸ್ಟ್ ಪಂದ್ಯದಲ್ಲಿ ಆಡಿದಂತೆ ಆಡಲಿಲ್ಲ. ಬದಲಿಗೆ ಏಕದಿನ, ಟಿ20ಐ ಪಂದ್ಯದಲ್ಲಿ ಆಡಿದಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಸ್ಟೋಕ್ಸ್ ಬ್ಯಾಟ್‌ನಿಂದ 82 ರನ್ (118 ಎಸೆತ) ಬಂದಿತ್ತು. ಇದರಲ್ಲಿ 10 ಪೋರ್ಸ್ ಮತ್ತು 3 ಸಿಕ್ಸರ್ ಕೂಡ ಸೇರಿತ್ತು.
ಸ್ಟೋಕ್ಸ್ ಹೊಡಿಬಡಿ ಆಟಕಂಡು ಐಪಿಎಲ್‌ನಲ್ಲಿ ಅವರಾಡುವ ರಾಜಸ್ಥಾನ್ ರಾಯಲ್ಸ್ ತಮಾಷೆಯಾಗಿ ಟ್ವೀಟ್ ಮಾಡಿದೆ. 'ಹೇಯ್ ಬೆನ್, ನಿಮ್ಮ ಫಾರ್ಮ್ ಅನ್ನು ನಾವು ಅಭಿನಂದಿಸುತ್ತೇವೆ. ಆದರೆ ಐಪಿಎಲ್‌ಗೆ ಇನ್ನೂ ಸಮಯವಿದೆ' ಎಂದು ಬರೆದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್, ಶನಿವಾರ ಎರಡನೇ ದಿನದಾಟದ ಅಂತ್ಯಕ್ಕೆ ರೋರಿ ಬರ್ನ್ಸ್ 33, ಡೊಮಿನಿಕ್ ಸಿಬ್ಲಿ 87, ಜೋ ರೂಟ್ 218, ಬೆನ್ ಸ್ಟೋಕ್ಸ್ 82, ಆಲ್ಲಿ ಪೋಪ್ 34, ಜೋಸ್ ಬಟ್ಲರ್ 30, ಡಮೊನಿಕ್ ಬೆಸ್ 28 ರನ್‌ನೊಂದಿಗೆ 180 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದು 555 ರನ್ ಗಳಿಸಿತ್ತು.