ಕೆ ಎಲ್ ರಾಹುಲ್ ನೋಡಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಲಿಯಲಿ ಎಂದ ಮಾಜಿ ಕ್ರಿಕೆಟಿಗ!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಬಹುನಿರೀಕ್ಷಿತ 5 ಪಂದ್ಯಗಳ ಟೆಸ್ಟ್ ಸರಣಿ ಬುಧವಾರ ಆರಂಭವಾಗಿದೆ. ಮೊದಲನೇ ಟೆಸ್ಟ್ ಪಂದ್ಯ ಇಂಗ್ಲೆಂಡ್‌ನ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು ಆದರೆ ಜೋ ರೂಟ್ ನಿರೀಕ್ಷಿಸಿದ ರೀತಿಯಲ್ಲಿ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು.
ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ನೀರಸ ಪ್ರದರ್ಶನವನ್ನು ತೋರಿದರು. ನಾಯಕ ಜೋ ರೂಟ್ 64 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ಕೂಡ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಸಫಲರಾಗಲಿಲ್ಲ. ಹೀಗೆ ಟೀಮ್ ಇಂಡಿಯಾದ ಬೌಲರ್‌ಗಳು ಉತ್ತಮ ಪ್ರದರ್ಶನವನ್ನು ನೀಡಿದ ಕಾರಣ ಇಂಗ್ಲೆಂಡ್ ತಂಡವನ್ನು 183 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ತನ್ನ ಪಾಲಿನ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾದ ಪರ ಆರಂಭಿಕ ಆಟಗಾರರಾಗಿ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿದರು.
ರೋಹಿತ್ ಶರ್ಮಾ 36 ರನ್ ಗಳಿಸಿ ಔಟ್ ಆದರೆ, ನಂತರ ಬಂದ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತಿಯನ್ನು ಪಡೆದಿರುವ ಚೇತೇಶ್ವರ್ ಪೂಜಾರ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು, ಚೇತೇಶ್ವರ್ ಪೂಜಾರ ವಿಫಲರಾದ ಬೆನ್ನಲ್ಲೇ ಆಗಮಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೇಮ್ಸ್ ಆ್ಯಂಡರ್ಸನ್ ಎಸೆದ ಮೊದಲ ಎಸೆತದಲ್ಲಿಯೇ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸುವ ಮೂಲಕ ಡಕ್ ಔಟ್ ಆದರು. ಹೀಗೆ ಭಾರೀ ನಿರೀಕ್ಷೆಯನ್ನು ಹೊತ್ತಿದ್ದ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆಗುವ ಮೂಲಕ ನಿರಾಸೆಯನ್ನು ಮೂಡಿಸಿದ್ದು ಮಾತ್ರವಲ್ಲದೆ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದಾರೆ. ಇನ್ನು ವಿರಾಟ್ ಕೊಹ್ಲಿ ನಂತರ ಅಜಿಂಕ್ಯ ರಹಾನೆ ಕೂಡ 5 ರನ್ ಗಳಿಸಿ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಹೀಗೆ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಾಲುಸಾಲಾಗಿ ವಿಕೆಟ್ ಒಪ್ಪಿಸುತ್ತಾ ಇದ್ದರೆ ಕೆಎಲ್ ರಾಹುಲ್ ಮಾತ್ರ ಜವಾಬ್ದಾರಿಯುತ ಆಟವನ್ನಾಡಿದರು. ಎರಡನೆ ದಿನದಾಟದಂತ್ಯಕ್ಕೆ 57 ರನ್ ಗಳಿಸಿ ಜವಬ್ದಾರಿಯುತ ಆಟವನ್ನಾಡಿದ ಕೆಎಲ್ ರಾಹುಲ್ ಕುರಿತು ಪಾಕಿಸ್ತಾನದ ಮಾಜಿ ಆಟಗಾರ ರಮೀಜ್ ರಾಜಾ ಮೆಚ್ಚುಗೆಯ ಮಾತುಗಳನ್ನಾಡಿದ್ದು ಈ ಕೆಳಕಂಡಂತೆ ವಿರಾಟ್ ಕೊಹ್ಲಿ ಜೊತೆ ಹೋಲಿಸಿ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ಕೆ ಎಲ್ ರಾಹುಲ್ ನೋಡಿ ಬ್ಯಾಟಿಂಗ್ ಕಲಿಯಲಿ
ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಉತ್ತಮ ಆಟವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ರಮೀಜ್ ರಾಜಾ ವಿಫಲರಾದ ವಿರಾಟ್ ಕೊಹ್ಲಿ ಕೆ ಎಲ್ ರಾಹುಲ್ ಆಟವನ್ನು ನೋಡಿ ಬ್ಯಾಟಿಂಗ್ ಕಲಿಯಲಿ ಎಂದಿದ್ದಾರೆ. ಇಂಗ್ಲೆಂಡ್ ಪಿಚ್‌ಗಳಲ್ಲಿ ಯಾವ ರೀತಿ ಜಾಣ್ಮೆಯಿಂದ ಆಡಬೇಕು ಎಂಬುದನ್ನು ವಿರಾಟ್ ಕೊಹ್ಲಿ ಕೆ ಎಲ್ ರಾಹುಲ್ ನೋಡಿ ಕಲಿಯಬೇಕಿದೆ ಎಂದು ರಮೀಜ್ ರಾಜಾ ಹೇಳಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಉತ್ತಮ ಆಟವನ್ನಾಡುವ ಕಲೆ ಕೆಎಲ್ ರಾಹುಲ್‌ಗೆ ಇದೆ
ಕೆಎಲ್ ರಾಹುಲ್ ಇಂಗ್ಲೆಂಡ್ ನೆಲದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುವುದು ಹೇಗೆ ಎಂಬುದನ್ನು ಬಲ್ಲವರಾಗಿದ್ದಾರೆ, ಎಂತಹ ಕಠಿಣ ಎಸೆತಗಳನ್ನೂ ಸರಿಯಾದ ರೀತಿಯಲ್ಲಿ ಸ್ವೀಕರಿಸಿ ಕೆಎಲ್ ರಾಹುಲ್ ಬ್ಯಾಟ್ ಬೀಸಿದ್ದಾರೆ, ಹೀಗಾಗಿಯೇ ಕೆ ಎಲ್ ರಾಹುಲ್ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆಟವನ್ನು ಆಡಿದ್ದಾರೆ ಎಂದು ರಮೀಜ್ ರಾಜಾ ಹೇಳಿದ್ದಾರೆ.

ಚೇತೇಶ್ವರ್ ಪೂಜಾರ ಕಳಪೆ ಆಟ
ಇನ್ನೂ ಮುಂದುವರಿದು ಮಾತನಾಡಿದ ರಮೀಜ್ ರಾಜಾ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಎಸೆತಕ್ಕೆ ಸರಿಯಾದ ರೀತಿಯಲ್ಲಿ ಬ್ಯಾಟ್ ಬೀಸದ ಚೇತೇಶ್ವರ್ ಪೂಜಾರ ಕಳಪೆ ಆಟವನ್ನು ಆಡಿ ವಿಕೆಟ್ ಒಪ್ಪಿಸಿದರು ಎಂದು ರಮೀಜ್ ರಾಜಾ ಬೇಸರ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications