
ಚೆನ್ನೈ: ಯಾವುದಾದರೂ ಪಂದ್ಯದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಕೀಪಿಂಗ್ ಜವಾಬ್ದಾರಿಯಲ್ಲಿದ್ದಾರೆ ಎಂದರೆ ಮುಗೀತು; ಅಲ್ಲಿ ತಮಾಷೆ ಇದ್ದಿದ್ದೇ. ಗ್ರೌಂಡಿನಲ್ಲಿ ಕೋತಿಯಂತೆ ಪಲ್ಟಿ ಹೊಡೆದು ಇಲ್ಲವೆ ತರಲೆ ಕಾಮೆಂಟ್ ಮಾಡಿಕೊಂಡು ನಮ್ಮ ಪಂತ್ ರಂಜಿಸುತ್ತಿರುತ್ತಾರೆ.
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೊದಲನೇ ಟೆಸ್ಟ್‌ನಲ್ಲೂ ಪಂತ್ ಇಂಥದ್ದೇ ತರಲೆಗಾಗಿ ಗಮನ ಸೆಳೆದಿದ್ದಾರೆ. ಈ ಬಾರಿ ಸ್ಟಂಪ್ ಮೈಕ್ ಬಳಿ ಪಂತ್ ತರಲೆ ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ.
70ನೇ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿ ಡೊಮಿನಿಕ್ ಸಿಬ್ಲಿ ಇದ್ದಾಗ ಬೌಲಿಂಗ್ ಮಾಡೋಕೆ ಯುವ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಬಂದಿದ್ದರು. ಈ ವೇಳೆ ಸುಮ್ಮನೆ ಕೀಪಿಂಗ್ ಮಾಡದ ಪಂತ್, 'ಮೇರಾ ನಾಮ್ ಹೈ ವಾಷಿಂಗ್ಟನ್, ಮುಜೆ ಜಾನಾ ಹೈ ಡಿಸಿ' (ನನ್ನ ಹೆಸರು ವಾಷಿಂಗ್ಟನ್. ನನಗೆ ಡಿಸಿಗೆ ಹೋಗಬೇಕಿದೆ) ಎಂದು ತಂಡದ ಆಟಗಾರನನ್ನು ಹುರಿದುಂಬಿಸಿದ್ದರು.
ಪಂತ್ ತರಲೆ ಕಾಮೆಂಟ್‌ಗೆ ಎದುರಾಳಿ ತಂಡದ ಸಿಬ್ಲಿ ಮತ್ತು ಜೋ ರೂಟ್ ಕೂಡ ನಕ್ಕರೆಂದು ಕಾಣಿಸುತ್ತೆ. ಪಂತ್ ಹೀಗೆ ತರಲೆ ಮಾಡಿರುವ ವಿಡಿಯೋ ಅಂತೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಇದಕ್ಕೆ ಬಗೆ ಬಗೆ ರೀತೀಲಿ ಕಾಮೆಂಟ್ ಮಾಡಿ ತಮಾಷೆ ತಗೊಳ್ಳುತ್ತಿದ್ದಾರೆ.