ಭಾರತದ ಪರವಾಗಿ ಕಣಕ್ಕಿಳಿಯುವ ಮುನ್ನ ಇಶಾನ್ ಕಿಶನ್‌ಗೆ ರೋಹಿತ್ ಹೇಳಿದ್ದೇನು?

ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಪರವಾಗಿ ಮೊದಲ ಬಾರಿಗೆ ಕಣಕ್ಕಿಳಿದ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಚೊಚ್ಚಲ ಪಂದ್ಯದಲ್ಲಿ ಅರ್ಧ ಶತಕವನ್ನು ಸಿಡಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸ್ಮರಣೀಯ ಪದಾರ್ಪಣೆಯನ್ನು ಮಾಡಿದ್ದಾರೆ. ಆದರೆ ಈ ಪಂದ್ಯದಲ್ಲಿ ಭಾರತದ ಪರವಾಗಿ ಬ್ಯಾಟಿಂಗ್‌ಗೆ ಇಳಿಯುವ ಮುನ್ನ ಇಶಾನ್ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರಿಂದ ಉಪಯುಕ್ತ ಸಲಹೆಯನ್ನು ಪಡೆದುಕೊಂಡಿದ್ದರು.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ ನಾಯಕ ವಿರಾಟ್ ಕೊಹ್ಲಿ ಜೊತೆಗೆ 94 ರನ್‌ಗಳ ಬೃಹತ್ ಜೊತೆಯಾಟದಲ್ಲಿ ಭಾಗಿಯಾದರು. 32 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 56 ರನ್ ಸಿಡಿಸಿದರು. 175ರ ಸ್ಟ್ರೈಕ್‌ರೇಟ್‌ನಲ್ಲಿ ಇಶಾನ್ ಬ್ಯಾಟ್ ಬೀಸಿದ್ದರು.
ಚೊಚ್ಚಲ ಪಂದ್ಯದಲ್ಲಿ ಅರ್ಧ ಶತಕವನ್ನು ಸಿಡಿಸಿದ ನಂತರ ಇಶಾನ್ ಕಿಶನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ರೋಹಿತ್ ನೀಡಿದ ಸಲಹೆ
ಪಂದ್ಯದ ಅಂತ್ಯದ ಬಳಿಕ ಇಶಾನ್ ಕಿಶನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. "ಪಂದ್ಯದ ಆರಂಭಕ್ಕೆ ಮುನ್ನ ರೋಹಿತ್ ಭಾಯ್ ನೀನು ಇನ್ನಿಂಗ್ಸ್ ಆರಂಬಿಸಲಿದ್ದೀಯಾ ಎಂದು ತಿಳಿಸಿದರು. ಐಪಿಎಲ್‌ನಲ್ಲಿ ನೀನು ಆಡಿದಂತೆಯೇ ನಿರ್ಭೀತಿಯಿಂದ ಹಾಗೂ ಸ್ಪಷ್ಟವಾಗಿ ಆಡು ಎಂದು ಹೇಳಿದ್ದರು" ಎಂದು ಇಶಾನ್ ಕಿಶನ್ ವಿವರಿಸಿದ್ದಾರೆ.

ನರ್ವಸ್ ಆದೆ
"ಆದರೆ ರಾಷ್ಟ್ರ ಧ್ವಜವನ್ನು ನೋಡಿದ ನಂತರ ಹಾಗೂ ಟೀಮ್ ಇಂಡಿಯಾ ಜರ್ಸಿಯನ್ನು ತೊಟ್ಟ ನಂತರ ನಾನು ಸ್ವಲ್ಪ ನರ್ವಸ್ ಆದೆ. ಆದರೆ ನಾನು ನನ್ನ ಅತ್ಯುತ್ತಮ ಆಟವನ್ನು ನೀಡಲು ಬಯಸಿದ್ದೆ" ಎಂದು ಇಶಾನ್ ಕಿಶನ್ ಮೊದಲ ಪಂದ್ಯದ ಬಗ್ಗೆ ಮಾತನಾಡುತ್ತಾ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ ಅನುಭವ
ಇಶಾನ್ ಕಿಶನ್ ದೇಶೀಯ ಕ್ರಿಕೆಟ್‌ನಲ್ಲಿ ಹಾಗೂ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ತಂಡದ ಪರವಾಗಿ ಕಣಕ್ಕಿಳಿಯುವ ಇಶಾನ್ ಕಿಶನ್ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ಇನ್ನಿಂಗ್ಸ್ ಆರಂಭಿಸಿದ ಇಶಾನ್
ಇನ್ನು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ವಿಶ್ರಾಂತಿಯನ್ನು ಪಡೆದಿದ್ದರು. ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರೆ ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ ಕೆಎಲ್ ರಾಹುಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸುವ ಹೊಣೆಹೊತ್ತಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications